ಮೈಸೂರು, ಮೇ6(ಆರ್‍ಕೆ)-ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆಗೈದಿದ್ದ ಇಬ್ಬರನ್ನು ಉದಯ ಗಿರಿ ಠಾಣೆ ಪೊಲೀಸರು ಘಟನೆ ನಡೆದ 12 ಗಂಟೆಯೊಳಗಾಗಿ ಬಂಧಿಸಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿಯ ವಾಲ್ಮೀಕಿ ರಸ್ತೆ ನಿವಾಸಿಗಳಾದ ಮಧು (20) ಹಾಗೂ ಕಿರಣ್ (22) ಹತ್ಯೆಗೈದು ತಲೆಮರೆಸಿಕೊಂಡವರಾಗಿದ್ದು, ಇವರ ಬೆನ್ನತ್ತಿದ ಪೊಲೀಸರು ತಿ.ನರಸೀಪುರದಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ರಾತ್ರಿ 9.30 ಗಂಟೆ ವೇಳೆಗೆ ಕ್ಯಾತಮಾರನಹಳ್ಳಿ 14ನೇ ಕ್ರಾಸ್‍ನ ಸತೀಶ ಎಂಬ ಯುವಕ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಮಧು ಮತ್ತು ಕಿರಣ್ ತಿ.ನರಸೀಪುರದಲ್ಲಿ ಅಡಗಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪೂಣಚ್ಚ ಅವರು ಆರೋಪಿಗಳ ಪತ್ತೆಗೆ ಸಬ್ ಇನ್ಸ್‍ಪೆಕ್ಟರ್ ಜಯಕೀರ್ತಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಮೊಬೈಲ್ ಟವರ್ ಲೊಕೇಷನ್ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು, ಬುಧವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಕೊಲೆ ಆರೋಪಿಗಳನ್ನು ತಿ.ನರಸೀಪುರದಲ್ಲಿ ಪತ್ತೆ ಮಾಡಿ, ಬಂಧಿಸಿದರು. ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಸೋಮವಾರ ರಾತ್ರಿ 8.30 ಗಂಟೆ ವೇಳೆಗೆ ಕ್ಯಾತಮಾರನಹಳ್ಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಸತೀಶ ದಾರಿ ಬಿಡದೇ ಬಾಯಿಗೆ ಬಂದಂತೆ ಮಾತನಾಡಿದ್ದರಿಂದ ಜಗಳವಾಗಿತ್ತು. ನಂತರ ಮದ್ಯ ಸೇವಿಸಿ ಬಂದು ಸತೀಶನಿಗಾಗಿ ಕಾದು ನಿಂತು ರಾತ್ರಿ 9.30 ಗಂಟೆ ವೇಳೆಗೆ ಹತ್ಯೆ ಮಾಡಿದ್ದಾಗಿ ಆರೋಪಿಗಳು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಇಂದು ಮಧ್ಯಾಹ್ನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮಧು ಮತ್ತು ಕಿರಣ್ ಗಾರೆ ಕೆಲಸಗಾರರು ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾರ್ಗದರ್ಶನದಲ್ಲಿ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡರ ಸಲಹೆ ಮೇರೆಗೆ ಎಸಿಪಿ ಶಶಿಧರ ಮೇಲ್ವಿಚಾರಣೆಯಲ್ಲಿ ಕೊಲೆ ಆರೋಪಿಗಳ ಪತ್ತೆ ಕಾರ್ಯವನ್ನು ನಡೆಸಲಾಯಿತು.