ನಿಮ್ಮ ಪತ್ರಗಳು

ಕೆ.ಆರ್. ಮಿಲ್ ಕಾರ್ಮಿಕರಿಗೆ ಈಗಲಾದರೂ ನ್ಯಾಯ ದೊರಕುವುದೇ?

April 19, 2018

ಮಾನ್ಯರೆ,

ಮೈಸೂರಿನ ಪ್ರತಿಷ್ಠಿತ ಕೃಷ್ಣರಾಜೇಂದ್ರ (ಕೆ.ಆರ್. ಮಿಲ್ಸ್) ಮಿಲ್ 4.6.1984 ರಂದು ಮುಚ್ಚಿ ಹೋಯಿತು. ಇಲ್ಲಿಯವರೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗೋಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದುವರೆಗೂ ಅವರಲ್ಲಿ ಎಷ್ಟು ಮಂದಿ ಮೃತ ಪಟ್ಟಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಕಾಮನಕೆರೆ ಹುಂಡಿ, ರಮ್ಮನಹಳ್ಳಿ, ಬೆಲವತ್ತ ಗ್ರಾಮ, ಮಂಟಿ, ಕಳಸ್ತವಾಡಿ, ನಾಗನಹಳ್ಳಿ, ನಗುವನಹಳ್ಳಿ, ಸಿದ್ದಲಿಂಗಪುರ, ಕುಂಬಾರಕೊಪ್ಪಲು, ಗಾಂಧಿನಗರ, ಎನ್.ಆರ್. ಮೊಹಲ್ಲಾ ಮುಂತಾದ ಕಡೆಗಳಿಂದ ಕಾರ್ಖಾನೆಗೆ ಕೆಲಸಕ್ಕೆ ಬರುತ್ತಿದ್ದರು.

ಕಾರ್ಖಾನೆ ಮುಚ್ಚಿ ಕೆಲಸ ಕಳೆದುಕೊಂಡು ಕಾರ್ಮಿಕರು ಅತಂತ್ರರಾದರು. ಕಾರ್ಮಿಕರಿಗೆ ಬರಬೇಕಾಗಿರುವ ಪರಿಹಾರದ ಹಣ ಸಹ ಇದುವರೆಗೂ ಬಂದಿಲ್ಲ. ನ್ಯಾಯ ಸಮ್ಮತವಾಗಿ ಪರಿಹಾರದ ಹಣ ಪಡೆಯಲು ಹೋರಾಟಗಳೂ ನಡೆದು ಬಂದವು.  ಕಾನೂನು ಹೋರಾಟಕ್ಕೂ ಫಲ ಸಿಕ್ಕಿಲ್ಲ.  ಕಾರ್ಖಾನೆಯನ್ನು ಮತ್ತೊಂದು ಸಂಸ್ಥೆ ವಹಿಸಿಕೊಂಡಾಗ ಕಾರ್ಮಿಕರಿಗೆ ನೀಡಬೇಕಾಗಿದ್ದ ಪರಿಹಾರ ಹಣವು ಸರ್ಕಾರದ ಪರವಾಗಿ ಅಫೀಷಿಯಲ್ ಲಿಕ್ವಿಡೇಟರ್ರವರ ಕಚೇರಿಯಲ್ಲಿ ಜಮಾ ಆಗಿರುತ್ತದೆ. ಮುಖ್ಯಮಂತ್ರಿಯವರು ತಮ್ಮ ತವರು ಕ್ಷೇತ್ರವಾದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೇರಿದ ಕೆ.ಆರ್. ಮಿಲ್ ಕಾರ್ಮಿಕರಿ ಗಾಗಿರುವ ಘೋರ ಅನ್ಯಾಯವನ್ನು ಸರಿಪಡಿಸಬೇಕು ಎಂದು ಕಳಕಳಿಯ ವಿನಂತಿ.

– ನೊಂದ ಕಾರ್ಮಿಕರು, ಮೈಸೂರು. ತಾ. 14.4.2018