ಕ್ರಾಂತಿಕಾರಕ ನಿರ್ಧಾರವೆಂದು ಬುರುಡೆ ಬಿಡಬೇಡಿ; ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸಿ
ಮೈಸೂರು

ಕ್ರಾಂತಿಕಾರಕ ನಿರ್ಧಾರವೆಂದು ಬುರುಡೆ ಬಿಡಬೇಡಿ; ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸಿ

November 1, 2022

ಮೈಸೂರು,ಅ.31(ಪಿಎಂ)-ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ವಾಸ್ತವ ವಾಗಿ ಬಿಜೆಪಿಯವರು ಮೀಸಲಾತಿ ವಿರೋಧಿಗಳು ಎಂದು ದೂರಿದ ವಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದಲ್ಲೂ ಬಿಜೆಪಿಯದೇ ಸರ್ಕಾರ ಇದ್ದು, ಈ ಮೀಸಲಾತಿ ಹೆಚ್ಚಳಕ್ಕೆ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸುವ ಕೆಲಸ ಮಾಡಲಿ. ಅದು ಬಿಟ್ಟು ಬರೀ ಕ್ರಾಂತಿಕಾರಕ ನಿರ್ಧಾರ ಎಂದು ಬುರುಡೆ ಬಿಟ್ಟರೆ ಆಗಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೋಮವಾರ ಬೆಳಗ್ಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ದಲ್ಲಿ ಆಗಮಿಸಿದ ಅವರು, ಇದೇ ವೇಳೆ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಳ ಮಾಡಲು ನ್ಯಾ.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಯಿತು. ಅಂದು ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದರು. ಆಯೋಗವು 2020ರ ಜು.7 ರಂದು ವರದಿ ನೀಡಿತು. ಈಗ 2 ವರ್ಷ ಮೂರು ತಿಂಗಳು ಆದ ಮೇಲೆ ಮೀಸಲಾತಿ ಹೆಚ್ಚಳದ ನಿರ್ಧಾರ ಕೈಗೊಂಡಿದ್ದಾರೆ. ವರದಿ ಕೊಟ್ಟಾಗಲೇ ಮಾಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.

ಮೀಸಲಾತಿ ಹೆಚ್ಚಳಕ್ಕಾಗಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ 257 ದಿನಗಳು ಧರಣಿ ಮಾಡಬೇಕಾ ಯಿತು. ನಮ್ಮ ಪಕ್ಷದ ಎಸ್‍ಸಿ ಹಾಗೂ ಎಸ್‍ಟಿ ಶಾಸಕರು ಪ್ರತೀ ಬಾರಿ ಸದನ ಕರೆದಾಗ ಮೀಸ ಲಾತಿ ಹೆಚ್ಚಳದ ಪ್ರಸ್ತಾಪ ಮಾಡಿ, ಧರಣಿ ನಡೆಸಿದ್ದಾರೆ. ಇದಕ್ಕೆ ಬಿಜೆಪಿಯ ಒಬ್ಬ ಶಾಸಕ ಬೆಂಬಲ ನೀಡಿದ್ರಾ? ಈ ಶ್ರೀರಾಮುಲು ಚುನಾವಣೆಗೆ ಮೊದಲು ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ನಾಗಮೋಹನ್ ದಾಸ್ ಅವರ ವರದಿ ಜಾರಿ ಗೊಳಿಸುವುದಾಗಿ ಹೇಳಿದ್ದರು. ಅಲ್ಲದೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು. ಈಗ ನಮ್ಮಿಂದ ಒತ್ತಡ ಹೆಚ್ಚಳ ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರ ಹೋರಾಟದ ಹಿನ್ನೆಲೆಯಲ್ಲಿ ವಿಧಿಯಿಲ್ಲದೆ, ಸುಗ್ರೀವಾಜ್ಞೆ ಹೊರಡಿಸಿದ್ದಾರೆ ಎಂದರು.

ಎರಡು ದಿನಗಳ ವಿಶೇಷ ಅಧಿವೇಶನ ಕರೆದು, ಮೀಸಲಾತಿ ಸಂಬಂಧ ಒಂದು ಕಾಯ್ದೆ ಮಾಡಿ ಎಂದು ನಾನು ಹೇಳಿದ್ದೆ. ಕಾಯ್ದೆ ನಂತರ ಕೇಂದ್ರದಲ್ಲಿಯೂ ಬಿಜೆಪಿಯದೇ ಸರ್ಕಾರ ಇರುವುದರಿಂದ ಅದನ್ನು ಸಂವಿಧಾನದ 9 ಶೆಡ್ಯೂಲ್‍ಗೆ ಸೇರಿಸಲು ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿದ್ದೆ. ಆದರೆ ಇವರು 9ನೇ ಶೆಡ್ಯೂಲ್ ಬಗ್ಗೆ ಮಾತನಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರಲ್ಲದೆ, ಇದಕ್ಕೆ ಸೇರಿಸದೇ ಹೋದರೆ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ ಎಂದು ಹೇಳಿದರು. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳ ಪೀಠವು ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಮೀರಬಾರದೆಂದು ತೀರ್ಪು ನೀಡಿದೆ. ಈಗ ಈ ಮಿತಿಯನ್ನು ಸಡಿಲ ಮಾಡಿ ಶೇ.6ರಷ್ಟು ಹೆಚ್ಚಳ ಮಾಡಲಾಗಿದೆ. ಇದರ ಜೊತೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಇದರಿಂದ ಒಟ್ಟು ಮೀಸಲಾತಿ ಶೇ.66ರಷ್ಟಾಯಿತು. ಹೀಗಾಗಿ ಇದಕ್ಕೆ ರಕ್ಷಣೆ ಸಿಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಬೇಕು ಎಂದು ಪ್ರತಿಪಾದಿಸಿದರು.

ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕಲ್ಲವೇ?: ಹೃದಯಾಘಾತದಿಂದ ಮೃತಪಟ್ಟ ಪೆÇಲೀಸ್ ಇನ್ಸ್‍ಪೆಕ್ಟರ್ ನಂದೀಶ್ ಅವರ ಅಂತಿಮ ದರ್ಶನಕ್ಕೆ ಹೋಗಿದ್ದ ಸಚಿವ ಎಂ.ಟಿ.ಬಿ.ನಾಗರಾಜ್, ಅಲ್ಲಿ ಪೆÇಲೀಸ್ ಸಿಬ್ಬಂದಿ ಜೊತೆ ಮಾತನಾಡುವಾಗ 70, 80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಹೃದಯಾಘಾತ ಆಗದೆ ಮತ್ತೇನಾಗುತ್ತೆ ಎಂದು ಹೇಳಿದ್ದಾರೆ. ಇದು ಯಾರೋ ದಾರಿಯಲ್ಲಿ ಹೋಗುವವರು ಹೇಳಿದ್ದಲ್ಲ, ಅವರೊಬ್ಬ ಸಚಿವರು. ನಂದೀಶ್ ಸಾಲ ಮಾಡಿ 70ರಿಂದ 80 ಲಕ್ಷ ಲಂಚ ನೀಡಿದ್ದಾರೆ. ಆಮೇಲೆ ಯಾವುದೋ ಕಾರಣಕ್ಕೆ ಅವರನ್ನು ಅಮಾನತು ಮಾಡಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಹೊಣೆ ಅಲ್ವಾ? ಈ ಲಂಚದ ಹಣವನ್ನು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಪಡೆದಿರಬೇಕು? ಅವರಿಗೆ ತಮ್ಮ ಸ್ಥಾನದಲ್ಲಿ ಮುಂದುವರೆ ಯುವ ಯಾವ ನೈತಿಕತೆ ಇದೆ. ರಾಜೀನಾಮೆ ಕೊಡಬೇಕಲ್ಲವೇ? ಎಂದು ಕಿಡಿಕಾರಿದರು.

ರಾಜಕೀಯ ಖಳನಾಯಕ ಎಂದು ತಮ್ಮನ್ನು ನಳಿನ್ ಕುಮಾರ್ ಕಟೀಲ್ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿ, ಅವನೊಬ್ಬ ಜೋಕರ್. ಅಂಥವರಿಗೆಲ್ಲ ನಾನು ಉತ್ತರ ಕೊಡುತ್ತಾ ಕೂರಲು ಆಗಲ್ಲ. ಕಟೀಲ್ ಯಾವ ಹಿನ್ನಲೆಯಿಂದ ಬಂದವರು? ಯಾವ ಹೋರಾಟ ಮಾಡಿಕೊಂಡು ಬಂದಿದ್ದಾರೆ? ಆರ್‍ಎಸ್‍ಎಸ್ ಹಿನ್ನಲೆ ಮಾತ್ರ ಹೊಂದಿದ್ದಾರೆ. ಹಾಗಾಗಿ ಕಟೀಲ್ ಹೇಳುವ ಮಾತುಗಳಿಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ ಎಂದು ಟೀಕಿಸಿದರು.

Translate »