‘ಜಸ್ಟ್ ಆಸ್ಕಿಂಗ್’ ವೇದಿಕೆ – ರೈ ರಾಜಕೀಯ
ನಿಮ್ಮ ಪತ್ರಗಳು

‘ಜಸ್ಟ್ ಆಸ್ಕಿಂಗ್’ ವೇದಿಕೆ – ರೈ ರಾಜಕೀಯ

April 24, 2018

ಮಾನ್ಯರೆ,

‘ರಾಜಕೀಯ ಪಕ್ಷದ ವೇದಿಕೆಯಲ್ಲಿ ನಿಂತು ಮಾತನಾಡಲು ನನಗೆ ಇಷ್ಟವಿಲ್ಲ, ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ’ ಎಂದು ಹೇಳಿರುವ ಪ್ರಕಾಶ್ ರೈ ರವರು, ‘ಜಸ್ಟ್ ಆಸ್ಕಿಂಗ್’ ಒಂದು ರಾಜಕೀಯ ವೇದಿಕೆ ಅಲ್ಲ ಎಂದಿದ್ದಾರೆ.

ಆದರೆ ಅವರು ಮಾಡುವುದು ಮತ್ತು ಮಾತನಾಡುವುದೆಲ್ಲಾ ಅಪ್ಪಟ ರಾಜಕೀಯವೇ. ಅದಕ್ಕೆ ಅಭಿಯಾನದ ಹೆಸರು ಏಕೆ ? ಕರ್ನಾಟಕದಲ್ಲಿ ಚುನಾವಣಾ ಸಮಯದಲ್ಲಿಯೇ ಈ ‘ಜಸ್ಟ್ ಆಸ್ಕಿಂಗ್’ವೇದಿಕೆ ಹುಟ್ಟಿಕೊಂಡದ್ದು ಏಕೆ ?.

‘ಜಸ್ಟ್ ಆಸ್ಕಿಂಗ್’ ಒಂದು ರಾಜಕೀಯ ವೇದಿಕೆ ಅಲ್ಲ ಎನ್ನುತ್ತಲೇ ಅವರು ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವನ್ನು ಟಾರ್ಗೆಟ್ ಮಾಡುತ್ತಾರೆ ಮತ್ತು ನಾನು ಆ ಪಕ್ಷದ ವಿರೋಧಿ ಎನ್ನುತ್ತಾರೆ. ಪರೋಕ್ಷವಾಗಿ ಒಂದು ಪಕ್ಷವನ್ನು ಬೆಂಬಲಿಸುತ್ತಾರೆ. ಅದು ‘ಕಾಂಗ್ರೆಸ್’ ಪಕ್ಷ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲವಷ್ಟೆ.

ಅವರು ವಿನಾಕಾರಣ ದ್ವೇಷಿಸುವ ಪಕ್ಷವನ್ನು ಕೋಮುವಾದಿ ಎನ್ನುತ್ತಾರೆ, ಕರ್ನಾಟಕ ವನ್ನು ಕೋಮುವಾದಿಗಳ ಕೈಗೆ ನೀಡಬೇಡಿ ಎಂದು ಕರೆ ಕೊಡುತ್ತಾರೆ. ಹೀಗೆ ಮಾತನಾಡುವುದು ರಾಜಕೀಯವಲ್ಲವೇ ? ಅವರು ಟಾರ್ಗೆಟ್ ಮಾಡಿರುವುದು ಭಾರತೀಯತೆಯನ್ನು ಎತ್ತಿ ಹಿಡಿಯುತ್ತಿರುವ, ಒಂದು ದೇಶ ಪ್ರೇಮಿ ಪಕ್ಷವನ್ನು. ಇದು ಯಾರಿಗಾದರೂ ಅರ್ಥವಾಗುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಅವರ ಪರ ಮಾತನಾಡುವವರು, ಹಿಂದೆಯಿದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವವರು ಇವರಿಗೆ `ಕೋಮುವಾದಿ’ಗಳಾಗಿ ಕಾಣುತ್ತಾರೆ. ಆಶ್ಚರ್ಯವೆಂದರೆ, ನಮ್ಮದು ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷಗಳೇ ಒಂದು ಸಮುದಾಯವನ್ನು ಹೆಚ್ಚಾಗಿ ಓಲೈಸುವುದೂ ಅಲ್ಲದೆ ಅವರಿಗೆ ಎಲ್ಲಾ ಸವಲತ್ತುಗಳನ್ನೂ ನೀಡಿ, ಅವರ ಕಾನೂನು ವಿರೋಧಿ ಕೃತ್ಯಗಳನ್ನೂ ಸಹ ಒಪ್ಪಿಕೊಂಡು ಕ್ಷಮಿಸಿಬಿಡುತ್ತಾರೆ. ಹೆಸರಿನಲ್ಲೇ ಜಾತ್ಯಾತೀತತೆ ಇರುವ ಪಕ್ಷವೂ ಸಹ ಓವೈಸಿಯವರ ಪಕ್ಷದ ಜೊತೆ ಕೈಜೋಡಿಸುತ್ತಾರೆ. ಇದೆಲ್ಲಾ `ಜಸ್ಟ್ ಆಸ್ಕಿಂಗ್’ ನವರಿಗೆ ಗೊತ್ತಿರುವ ವಿಷಯವೇ ! ನಿಜವಾದ ಕೋಮುವಾದಿಗಳು ಯಾರು ? ಈ ಕೋಮುವಾದಿಗಳಿಗೆ ಬೆಂಬಲ ದೊರೆಯುತ್ತಿರುವುದಾದರೂ ಎಲ್ಲಿಂದ ಎಂಬುದನ್ನು ‘ಜಸ್ಟ್ ಆಸ್ಕಿಂಗ್ ‘ ವೇದಿಕೆ ಹೊರಗೆಡವುವುದೇ ?

‘ಟಿಪ್ಪು ಜಯಂತಿ’ಯ ಬಗ್ಗೆ ಜನತೆಯೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳುವ ರೈ, ಜನತೆಯ ವಿರೋಧವನ್ನೂ ಲೆಕ್ಕಿಸದೆ ಸರ್ಕಾರವೇ ಟಿಪ್ಪು ಜಯಂತಿಯನ್ನು ಆಚರಿಸುವ ಸಮಯದಲ್ಲಿ ತುಟಿಬಿಚ್ಚದೆ, ಟಿಪ್ಪು ಜಯಂತಿಗೆ ಪರೋಕ್ಷ ಬೆಂಬಲ ನೀಡಿ ಈಗ ಹಾರಿಕೆಯ ಸಮಜಾಯಿಷಿ ನೀಡುತ್ತಾರೆ.

ಮೈಸೂರಿನ ಉದಯಗಿರಿ ಉದ್ವಿಗ್ನವಾಗಿದೆ. ಪ್ರತಿಭಟನಾಕಾರರು ಪೆÇಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಅವರನ್ನು ಗಾಯಗೊಳಿಸುತ್ತಾರೆ. ಬಲವಂತವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುತ್ತಾರೆ, ಪೆÇಲೀಸರ ಅನುಮತಿಯಿಲ್ಲದೆ ಮೆರವಣಿಗೆ ಮಾಡುತ್ತಾರೆ. ಅಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಪ್ರತಿಭಟನಾಕಾರರಿಗೆ ರಾಜಕಾರಣಿಗಳ ಕುಮ್ಮಕ್ಕಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಯ ನಾಗರಿಕರು ಭಯದಿಂದ ದಿನ ದೂಡುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂದು ವರದಿಯಾಗಿದೆ. ಈ ಬಗ್ಗೆ `ಜಸ್ಟ್ ಆಸ್ಕಿಂಗ್’ ವೇದಿಕೆ ಅದೇಕೆ ಪ್ರತಿಕ್ರಿಯೆ ನೀಡಿಲ್ಲ ?

25ಕ್ಕಿಂತ ಹೆಚ್ಚು ಮಂದಿ ಹಿಂದೂಗಳ ಕೊಲೆಯಾಗಿದೆ. ಸರ್ಕಾರ ಈ ಬಗ್ಗೆ ನಿಷ್ಕ್ರೀಯವಾಗಿದೆ. ಇದರ ಬಗ್ಗೆ ರೈ ರವರ ನಿಲುವೇನು ? ಅಂದರೆ ‘ಜಸ್ಟ್ ಆಸ್ಕಿಂಗ್’ ಒಂದು ಪಕ್ಷದ ಪರ, ಹಿಂದೂ ಸಮುದಾಯದ ವಿರುದ್ಧ ಇರುವ ವೇದಿಕೆ ಎಂದು ಹೇಳಲಾಗುತ್ತಿದ್ದು, ಇದರ ಮರ್ಮವನ್ನು ತಿಳಿಯದೆ ಇರುವಷ್ಟು ಮೂರ್ಖರೇನಲ್ಲ ಮೈಸೂರಿನ ಜನತೆ.

‘ಜಸ್ಟ್ ಅಸ್ಕಿಂಗ್’ ವೇದಿಕೆಯು ಒಮ್ಮುಖವಾಗದೆ, ನಿಜ ಪರಿಸ್ಥಿತಿಯನ್ನು ಬಿಂಬಿಸುವ, ಒಂದು ಪಕ್ಷದ ಪರ ಲಾಬಿ ಮಾಡದೆ, ಸಂದರ್ಭಗಳನ್ನು ಅರ್ಥೈಸಿಕೊಂಡು ಮುನ್ನಡೆಯುವ ವೇದಿಕೆಯಾಗಲಿ ಎಂಬುದೇ ಜನಸಾಮಾನ್ಯರ ಒತ್ತಾಸೆಯಾಗಿದೆ.

-ಬೇಲೂರು ದ ಶಂ ಪ್ರಕಾಶ್, ಮೈಸೂರು. ತಾ.23.4.2018

Translate »