ಟಿಎಪಿಸಿಎಂಎಸ್‍ಗೆ ಸೇರಿದ ಜಾಗಕ್ಕೆ ಬೀಗ: ರೈಲ್ವೆ ಗೂಡ್ಸ್ ಶೆಡ್ ಲಾರಿ ನಿಲುಗಡೆ ಸಮಸ್ಯೆ ಉಲ್ಬಣ
ಮೈಸೂರು

ಟಿಎಪಿಸಿಎಂಎಸ್‍ಗೆ ಸೇರಿದ ಜಾಗಕ್ಕೆ ಬೀಗ: ರೈಲ್ವೆ ಗೂಡ್ಸ್ ಶೆಡ್ ಲಾರಿ ನಿಲುಗಡೆ ಸಮಸ್ಯೆ ಉಲ್ಬಣ

February 2, 2021

ಮೈಸೂರು,ಫೆ.1-ಮೈಸೂರಿನ ಜೋಡಿ ತೆಂಗಿನ ಮರ ರಸ್ತೆಯಲ್ಲಿ ರುವ ರೈಲ್ವೆ ಗೂಡ್ಸ್ ಶೆಡ್ ಲಾರಿ ನಿಲ್ದಾಣದ ಗೇಟ್‍ಗೆ ಟಿಎಸಿಎಂಎಸ್ ವತಿಯಿಂದ ಬೀಗ ಹಾಕಿದ ಪರಿಣಾಮ ಈ ರಸ್ತೆಯಲ್ಲಿ ನೂರಾರು ಲಾರಿಗಳು ನಿಲುಗಡೆಯಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಲಾರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸುಮಾರು 100 ಲಾರಿಗಳು ಹೊರ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದು, ರೈಲು ಗೂಡ್ಸ್ ಗಳಲ್ಲಿ ಸೋಮವಾರ ಬಂದಿರುವ ಪಡಿತರ ಲೋಡ್ ಅನ್ನು ಸಾಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿವರ: ಮೈಸೂರಿನಲ್ಲಿ ಅಧಿಕೃತವಾಗಿ ಲಾರಿ ಸ್ಟ್ಯಾಂಡ್ ಇಲ್ಲ. ರೈಲ್ವೇ ಗೂಡ್ಸ್ ಶೆಡ್‍ನಿಂದ ಪಡಿತರ ಮತ್ತಿತರ ಸಾಮಗ್ರಿಗಳನ್ನು ಸಾಗಿಸುವ ಸುಮಾರು 300ಕ್ಕೂ ಹೆಚ್ಚು ಲಾರಿಗಳನ್ನು ಕಳೆದ 15 ವರ್ಷಗಳಿಂದ ಜೋಡಿ ತೆಂಗಿನ ಮರ ರಸ್ತೆಯಲ್ಲಿ ಟಿಎಪಿಸಿಎಂಎಸ್‍ಗೆ ಸೇರಿದ ಜಾಗವನ್ನು ಗುತ್ತಿಗೆಗೆ ಪಡೆದು ನಿಲ್ಲಿಸಲಾಗುತ್ತಿತ್ತು. ಲಾರಿ ಮಾಲೀಕರಲ್ಲೇ ಒಬ್ಬರು ಈ ಜಾಗವನ್ನು ಗುತಿಗೆ ಪಡೆದು ಲಾರಿ ಸ್ಟ್ಯಾಂಡ್ ಮಾಡಿಕೊಂಡಿದ್ದರು. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಗುತ್ತಿಗೆ ಅವಧಿ ಮುಕ್ತಾಯವಾಗಿ ಟಿಎಪಿಸಿಎಂಎಸ್‍ನ ಅಂದಿನ ಆಡಳಿತಾಧಿಕಾರಿಗಳು ತಾತ್ಕಾಲಿಕವಾಗಿ ಜ.31ರವರೆಗೆ ಲಾರಿ ಸ್ಟ್ಯಾಂಡ್‍ಗೆ ಅವಕಾಶ ನೀಡಿದ್ದರು. ಟಿಎಪಿಸಿಎಂಎಸ್‍ನಲ್ಲಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಜನವರಿ 31ಕ್ಕೆ ಸ್ಟ್ಯಾಂಡ್ ಖಾಲಿ ಮಾಡುವಂತೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು. ಸೋಮವಾರ ಬೆಳಗ್ಗೆಯೇ ಟಿಎಪಿಸಿಎಂಎಸ್‍ನವರು ಲಾರಿ ಸ್ಟ್ಯಾಂಡ್‍ನ ಗೇಟ್‍ಗೆ ಬೀಗ ಜಡಿದಿದ್ದಾರೆ. ಸ್ಟ್ಯಾಂಡ್ ಒಳಗೆ ನಿಂತಿರುವ ಸುಮಾರು 100 ಲಾರಿಗಳು ಹೊರಬರಲಾಗದೇ ಅಲ್ಲೇ ನಿಂತಿವೆ. ನಾಳೆ ರೈಲ್ವೆ ಗೂಡ್ಸ್ ಶೆಡ್‍ನಿಂದ ಪಡಿತರ ಪದಾರ್ಥಗಳನ್ನು ಸಾಗಿಸುವ ಸಲುವಾಗಿ ಇಂದು ಸಂಜೆ ಮೈಸೂರಿಗೆ ಆಗಮಿಸಿದ 100ಕ್ಕೂ ಹೆಚ್ಚು ಲಾರಿಗಳು ಸ್ಟ್ಯಾಂಡ್ ಒಳಗೆ ಹೋಗಲಾಗದೆ ಜೋಡಿ ತೆಂಗಿನ ಮರ ರಸ್ತೆಯ ಎರಡೂ ಬದಿಗಳಲ್ಲೂ ನಿಲ್ಲಿಸಿರುವ ಪರಿಣಾಮ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇಂದು ಸಂಜೆ ನೂರಾರು ಲಾರಿ ಮಾಲೀಕರು ಮತ್ತು ಚಾಲಕರು ಸ್ಟ್ಯಾಂಡ್ ಮುಂದೆ ಜಮಾಯಿಸಿದ್ದರು. ಇಲ್ಲಿನ ಪರಿಸ್ಥಿತಿ ಬಗ್ಗೆ ಮಂಡಿ ಠಾಣೆಯ ಇನ್ಸ್‍ಪೆಕ್ಟರ್‍ಗೆ ಮೊಬೈಲ್ ಮೂಲಕ ವಿವರಿಸಿ, ತಾವು ಅನಿವಾರ್ಯವಾಗಿ ರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡಿ ರುವ ಬಗ್ಗೆ ಮಾಹಿತಿ ನೀಡಿದರು. ತಕ್ಷಣವೇ ಪೊಲೀಸ್ ಇನ್ಸ್‍ಪೆಕ್ಟರ್ ಸ್ಥಳಕ್ಕೆ ಧಾವಿಸಿದರಾದರೂ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಅಸಹಾಯಕರಾದರು. ನಾಳೆ ಟಿಎಪಿಸಿಎಂಎಸ್‍ಗೆ ಸಂಬಂಧಿಸಿದ ಅಧಿಕಾರಿ ವರ್ಗದೊಂದಿಗೆ ಮಾತುಕತೆ ನಡೆಸುವುದಾಗಿ ಲಾರಿ ಮಾಲೀಕರು ಮತ್ತು ಚಾಲಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

 

 

Translate »