ಮೈಸೂರು ಜಿಲ್ಲೆಯಲ್ಲಿ ೧೦೮ ಡೆಂಗ್ಯೂ ಪ್ರಕರಣ ಪತ್ತೆ: ಇಬ್ಬರು ಸಾವು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ೧೦೮ ಡೆಂಗ್ಯೂ ಪ್ರಕರಣ ಪತ್ತೆ: ಇಬ್ಬರು ಸಾವು

November 17, 2021

ವಾರಕ್ಕೊಮ್ಮೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು

ಸೊಳ್ಳೆ ಹೆಚ್ಚಾಗದಂತೆ ಕಟ್ಟೆಚ್ಚರಕ್ಕೆ ಸಲಹೆ

ಅಶೋಕಪುರಂನಲ್ಲಿ ವ್ಯಕ್ತಿಯೊಬ್ಬರು ಲಸಿಕೆ ಪಡೆದಿದ್ದರಿಂದಲೇ ಸಾವು ಸಂಭವಿಸಿದೆ ಎಂದುಹೇಳುವುದು ತಪ್ಪು. ಆ ವ್ಯಕ್ತಿಗೆ ಹೃದಯ ಸಂಬAಧಿ ಖಾಯಿಲೆ ಇತ್ತು. ಇದು ಸಾವಿಗೆ ಕಾರಣ ಆಗಿರಬಹುದು. ಈ ಪ್ರಕರಣದಿಂದಾಗಿ ಲಸಿಕೆ ಹಾಕುವ ಎಲ್ಲಾ ಕೇಂದ್ರಗಳಲ್ಲೂ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ೨-೩ ಬಾರಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಯಾವುದಾದರೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ವಿಚಾರಿಸುವಂತೆ ಸಲಹೆ ನೀಡಲಾಗಿದೆ. ಈಗಾಗಲೇ ಎಲ್ಲಾ ಕೇಂದ್ರಗಳಲ್ಲೂ ಲಸಿಕೆ ಪಡೆಯಲು ಬರುವವರಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೂ ಒಮ್ಮೆ ಕೇಳಿದರೆ ಕೆಲವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹೇಳದೆ ಮುಚ್ಚಿಟ್ಟುಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ೨-೩ ಬಾರಿ ಕೇಳುವಂತೆ ಸೂಚಿಸಲಾಗಿದೆ. – ಡಿಹೆಚ್‌ಓ ಡಾ. ಕೆ.ಹೆಚ್.ಪ್ರಸಾದ್

ಮೈಸೂರು,ನ.೧೬(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯ ನೀರಿನ ಟ್ಯಾಂಕ್, ಸಂಪ್ ಸ್ವಚ್ಛಗೊಳಿಸಿ ಸೊಳ್ಳೆ ಹೆಚ್ಚಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ನಿಯಂತ್ರಣ, ಲಸಿಕೆ ಹಾಕುವ ಅಭಿಯಾನದೊಂದಿಗೆ ಸಾಂಕ್ರಮಿಕ ರೋಗ ಹರಡದಂತೆಯೂ ಕಟ್ಟೆಚ್ಚರವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಆರೋಗ್ಯ ಕಾರ್ಯಕರ್ತರು ಕೋವಿಡ್ ಕರ್ತವ್ಯದ ನಡುವೆ ಜನರನ್ನು ಸಾಂಕ್ರಾಮಿಕ ರೋಗ ಬಾಧಿಸ ದಂತೆ ನೋಡಿಕೊಳ್ಳುತ್ತಿದ್ದಾರೆ. ಜನವರಿಯಿಂದ ನವೆಂಬರ್‌ವರೆಗೂ ೧೦೮ ಡೆಂಗ್ಯೂ ಪ್ರಕರಣ ದಾಖಲಾಗಿದೆ. ಅದರಲ್ಲಿ ಪಿರಿಯಾಪಟ್ಟಣ ಹಾಗೂ ಮೈಸೂರು ತಾಲೂಕಲ್ಲಿ ತಲಾ ಒಂದರAತೆ ಇಬ್ಬರು ಡೆಂಗ್ಯೂ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ ಎರಡು ತಿಂಗಳಲ್ಲಿ ೨೮ ಪ್ರಕರಣ ಪತ್ತೆಯಾ ಗಿದೆ ಎಂದ ಅವರು, ಕಳೆದ ಕೆಲವು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸೊಳ್ಳೆಗಳ ಬಾಧೆಗೆ ಒಳಗಾಗದೆ ಕಟ್ಟೆಚ್ಚರ ವಹಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಇಬ್ಬರನ್ನು ಹೊರತುಪಡಿಸಿದರೆ ಡೆಂಗ್ಯೂಗೆ ತುತ್ತಾಗಿದ್ದ ಉಳಿದ ಎಲ್ಲರೂ ಗುಣ ಮುಖರಾಗಿದ್ದಾರೆ. ಮಳೆಯ ನಂತರ ಸೊಳ್ಳೆಗಳು ಹೆಚ್ಚಾಗುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಯಿಂದ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮ ಗಳನ್ನು ನಡೆಸುತ್ತಿದ್ದಾರೆ. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳು ಸಂತಾನೋತ್ಪತಿ ಮಾಡದಂತೆ ಶುಚಿಯಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ೨೨ ಲಕ್ಷ ಮಂದಿಗೆ ಮೊದಲ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದ್ದು, ೧೩ ಲಕ್ಷ ಮಂದಿಗೆ ೨ನೇ ಡೋಸ್ ನೀಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯದವರನ್ನು ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ತಿಳಿಸಿದರು.

Translate »