ರಾಮನಾಥತುಂಗ ಹೊಸಕೊಪ್ಪಲಲ್ಲಿ ಡೈರಿ ಕಟ್ಟಡ ಕಾಮಗಾರಿಗೆ ಚಾಲನೆ
ಮೈಸೂರು

ರಾಮನಾಥತುಂಗ ಹೊಸಕೊಪ್ಪಲಲ್ಲಿ ಡೈರಿ ಕಟ್ಟಡ ಕಾಮಗಾರಿಗೆ ಚಾಲನೆ

April 25, 2021

ಪಿರಿಯಾಪಟ್ಟಣ, ಏ.24(ವೀರೇಶ್)- ಗ್ರಾಮಕ್ಕೊಂದು ಡೈರಿ, ಅದಕ್ಕೊಂದು ಕಟ್ಟಡ ಎಂಬ ಗುರಿಯೊಂದಿಗೆ ಮೈಮುಲ್ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು. ತಾಲೂಕಿನ ರಾಮನಾಥತುಂಗ ಹೊಸಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಡೈರಿಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಲಿ ಎಂಬ ಉದ್ದೇಶದೊಂದಿಗೆ ನಮ್ಮ ತಾಲೂಕಿಗೆ ಮೈಮುಲ್‍ನಿಂದ 1 ಕೋಟಿ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಗ್ರಾಮದ ಡೈರಿ ನಿರ್ಮಾಣಕ್ಕೆ 4 ಲಕ್ಷ ಹಣ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬೇಕಿದ್ದರೆ ಅದನ್ನೂ ನೀಡಲು ಸಿದ್ಧ. ನಾನು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು, ನಮ್ಮ ತಾಲೂಕಿನಲ್ಲಿ 170 ಮತದಾರರಲ್ಲಿ 162 ಜನರು ನನಗೆ ಮತ ನೀಡಿದ್ದಾರೆ. ಅವರ ಋಣ ತೀರಿಸಲು ಬದ್ಧನಾಗಿದ್ದೇನೆ ಎಂದರು.

ತಾಲೂಕಿನಲ್ಲಿ ನನ್ನ ಅವಧಿಯಲ್ಲಿ 47 ಹೊಸ ಡೈರಿಗಳನ್ನು ಪ್ರಾರಂಭಿಸಲಾಗಿದ್ದು, 22 ಬಿಎಂಸಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಈ ಹಿಂದೆ ಷೇರುದಾರರು ಮರಣ ಹೊಂದಿದರೆ 30 ಸಾವಿರ ವಿಮೆ ಹಣ ನೀಡಲಾಗುತ್ತಿತ್ತು. ಅದನ್ನು 1 ಲಕ್ಷಕ್ಕೆ ಏರಿಸಲಾಗಿದೆ. ಈ ಹಿಂದೆ ಒಂದು ವರ್ಷಕ್ಕೆ ಹಸುಗಳಿಗೆ ವಿಮೆ ಮಾಡಿಸ ಲಾಗುತ್ತಿತ್ತು ಅದನ್ನು ಈಗ 3 ವರ್ಷಗಳ ಅವಧಿಗೆ ಮಾಡಿಸಲಾಗುತ್ತಿದ್ದು, ಶೇ.100 ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ. ತಾಲೂಕಿನಲ್ಲಿ ಒಬ್ಬರು ಪಶು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದರು ಇದೀಗ 2 ಕೆಲಸ ನಿರ್ವಹಿಸುತ್ತಿದ್ದಾರೆ. ಮೈಮುಲ್‍ನಿಂದ ನೀಡುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲಾಗುತ್ತಿದೆ ಎಂದರು.

ಈ ವೇಳೆ ಮೈಮುಲ್ ನಿರ್ದೇಶಕ ರಾಜೇಂದ್ರ, ತಾಪಂ ಸದಸ್ಯ ಆರ್.ಎಸ್.ಮಹದೇವ, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಟಿ.ರೇವಣ್ಣ, ಡೇರಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಮಹದೇವ ನಾಯಕ, ಸಿಎಓ ಆರ್.ಎ.ಮಹದೇವ್, ನಿರ್ದೇಶಕರಾದ ರಘು, ಮಹದೇವ, ಮೋಟೇಗೌಡ, ಗುರುಮೂರ್ತಿ, ಬಸವರಾಜು, ಗ್ರಾ.ಪಂ.ಸದಸ್ಯ ಆರ್.ಎಸ್.ಹರೀಶ್, ಮುಖಂಡರಾದ ಬಸವರಾಜೇಅರಸ್, ಶಿವಣ್ಣ ಮತ್ತಿತರರಿದ್ದರು.

 

Translate »