ವರಿಷ್ಠರೊಂದಿಗೆ `ಸಂಪುಟ  ವಿಸ್ತರಣೆ’ ಪ್ರಸ್ತಾಪವಿಲ್ಲ: ಸಿಎಂ
News

ವರಿಷ್ಠರೊಂದಿಗೆ `ಸಂಪುಟ ವಿಸ್ತರಣೆ’ ಪ್ರಸ್ತಾಪವಿಲ್ಲ: ಸಿಎಂ

September 8, 2021

ಬೆಂಗಳೂರು, ಸೆ.7(ಕೆಎಂಶಿ)- ಮಂತ್ರಿ ಮಂಡಲ ಸೇರಲು ತುದಿಗಾಲಲ್ಲಿ ನಿಂತಿದ್ದ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೊಡ್ಡ ಶಾಕ್ ನೀಡಿದ್ದಾರೆ.

ಸದ್ಯಕ್ಕೆ ಮಂತ್ರಿಮಂಡಲದ ವಿಸ್ತರಣೆ ಇಲ್ಲ. ಈ ಸಂಬಂಧ ದೆಹಲಿ ಭೇಟಿ ಸಂದರ್ಭದಲ್ಲಿ ವರಿಷ್ಠರ ಜೊತೆಯು ಚರ್ಚೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ದಿನಗಳ ದೆಹಲಿ ಪ್ರವಾಸ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿದಂತೆ ವರಿಷ್ಠರ ಭೇಟಿಗೆ ಸಮಯ ಕೋರಿಲ್ಲ. ಈ ಬಾರಿಯ ಭೇಟಿಯಲ್ಲಿ ರಾಜಕೀಯ ಪ್ರಸ್ತಾವ ಇರುವುದಿಲ್ಲ. ಅಭಿವೃದ್ಧಿಗೆ ಸಂಬಂಧಿಸಿ ವಿತ್ತ ಸಚಿವೆ, ಭೂ ಸಾರಿಗೆ ಸಚಿವರು ಸೇರಿದಂತೆ ಕೆಲವರನ್ನು ಭೇಟಿ ಮಾಡುತ್ತೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪುತ್ರಿ ಆರತಕ್ಷತೆ ಸಮಾರಂಭವಿದೆ. ಆ ವೇಳೆಯಲ್ಲಿ ನಡ್ಡಾ ಅವರು ಬಂದರೆ ಭೇಟಿ ಮಾಡುತ್ತೇನೆ ಅಷ್ಟೆ. ನಿಗಮ ಮಂಡಳಿಗಳ ನೇಮಕ ಅಥವಾ ಖಾತೆಗಳ ಬದಲಾವಣೆ, ರಾಜಕೀಯ ಕಾರ್ಯದರ್ಶಿಗಳ ನೇಮಕ ಇತ್ಯಾದಿಗಳಿಗೆ ಸಂಬಂಧಿಸಿದಂತೆಯೂ ಈ ಬಾರಿ ವರಿಷ್ಠರೊಟ್ಟಿಗೆ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಸಂಬಂಧಿಸಿ ಭೂ ಸಾರಿಗೆ ಸಚಿವರ ಜೊತೆ ಚರ್ಚೆ ಮಾಡಿ, ಕೆಲವು ಹೊಸ ಯೋಜನೆಗಳಿಗೆ ಅನುಮತಿ ಪಡೆದುಕೊಳ್ಳುವುದಾಗಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಸತಿ ಹಾಗೂ ನಗರಾಭಿವೃದ್ಧಿ ಸಚಿವರನ್ನೂ ಭೇಟಿಯಾಗಲಿದ್ದು, ರಾಜ್ಯದ ವಿವಿಧ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬಿಡುಗಡೆ ಸಲುವಾಗಿ ದೆಹಲಿಗೆ ತೆರಳಲಿರುವುದಾಗಿ ಹೇಳಿದರು. ವಸತಿ ಮತ್ತು ನಗರಾಭಿವೃದ್ಧಿ ಸಂಬಂಧಿಸಿದಂತೆ ಕೇಂದ್ರ ಸಚಿವರು ಬೆಂಗಳೂರಿಗೆ ಬಂದಾಗ ಹಲವಾರು ಯೋಜನೆಗಳ ಬಗ್ಗೆ ಚರ್ಚೆಯಾಗಿತ್ತು.

ನಗರ ವಸತಿ ಹಾಗೂ ಮೆಟ್ರೋ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಕಳೆದ ವಾರ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಹಾಗೂ ಕೆಲವು ಸಚಿವರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ವರಿಷ್ಠರೊಟ್ಟಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿಕೆ ನೀಡಿ, ಅತೃಪ್ತರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಈ ಬಾರಿ ದೆಹಲಿಗೆ ತೆರಳುವುದಕ್ಕೂ ಮುನ್ನ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ರಾಜಕೀಯ ಚರ್ಚೆ ದೆಹಲಿ ಭೇಟಿ ಸಂದರ್ಭದಲ್ಲಿ ಇಲ್ಲ ಎಂದು ಹೇಳುವುದರ ಮೂಲಕ ಆಕಾಂಕ್ಷಿಗಳಿಗೆ ಶಾಕ್ ನೀಡಿದ್ದಾರೆ.

Translate »