ಲತಾ ಮಂಗೇಶ್ಕರ್ ಇನ್ನಿಲ್ಲ
News

ಲತಾ ಮಂಗೇಶ್ಕರ್ ಇನ್ನಿಲ್ಲ

February 7, 2022

ಮುಂಬೈ, ಫೆ.6-ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಭಾನುವಾರ ಬೆಳಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. 92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ.ಪ್ರತೀತ್ ಸಮ್ದನಿ ಅವರು, ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 2 ಗಂಟೆ 12 ನಿಮಿಷಕ್ಕೆ ನಿಧನ ಹೊಂದಿದರು. ಕೋವಿಡ್ ಸೋಂಕಿಗೆ ತುತ್ತಾಗಿ ಜನವರಿ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿ 28 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ, ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಲತಾ ಮಂಗೇಶ್ಕರ್ ನಿಧನರಾಗುವುದಕ್ಕೆ ಕೆಲ ನಿಮಿಷಗಳ ಮುನ್ನ ಮಹಾರಾಷ್ಟ್ರದವರೇ ಆದ ಕೇಂದ್ರ ಭೂ ಸಾರಿಗೆ ಸಚಿವ ನಿತೀಶ್ ಗಡ್ಕರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅವರು ಆಸ್ಪತ್ರೆಯಿಂದ ಹೊರಬರುವಷ್ಟ ರಲ್ಲಿ ಲತಾ ಅವರು ನಿಧನರಾದ ಸುದ್ದಿ ಹೊರ ಬಿತ್ತು. ಆಸ್ಪತ್ರೆ ಆವ ರಣದಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿತಿನ್ ಗಡ್ಕರಿ, ಲತಾ ಮಂಗೇಶ್ಕರ್ ನಿಧನ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಂಗೀತವು ಅನೇಕ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು

ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಿತು. ಸಂಜೆ 4 ಗಂಟೆಗೆ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಶಿವಾಜಿ ಪಾರ್ಕ್‍ವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಕುಟುಂಬಸ್ಥರು ಹಾಗೂ ಹಲವಾರು ಗಣ್ಯರು ಭಾಗವಹಿಸಿದ್ದರು. ಶಿವಾಜಿ ಪಾರ್ಕ್‍ನಲ್ಲಿ ಕೂಡ ಅಂತಿಮ ದರ್ಶನಕ್ಕೆ ಕೆಲ ಕಾಲ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿ, ಬಿಗ್ ಬಿ ಅಮಿತಾಭ್ ಬಚನ್ ಸೇರಿದಂತೆ ಹಲವಾರು ಗಣ್ಯರು ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠ ಗಾಯಕರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟ ಲತಾ ಮಂಗೇಶ್ಕರ್, 1929ರ ಸೆಪ್ಟೆಂಬರ್ 28ರಂದು ಜನಿಸಿದರು. ಅವರ ಮೊದಲ ಹೆಸರು ಹೇಮಾ ಮಂಗೇಶ್ವರ್ ಎಂಬುದಾಗಿ ಇತ್ತು. ನಂತರ ಲತಾ ಮಂಗೇಶ್ವರ್ ಎಂದು ಹೆಸರನ್ನು ಬದಲಾಯಿಸಿಕೊಂಡರು. ತಮ್ಮ 13ನೇ ವಯಸ್ಸಿನಲ್ಲಿ 1942ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡು ಗಳನ್ನು ಹಾಡಿದ್ದಾರೆ. ಹಿನ್ನೆಲೆ ಗಾಯನದ ಜೊತೆಗೆ ಸಂಗೀತ ನಿರ್ದೇಶಕರಾಗಿಯೂ ಹಲವು ಚಿತ್ರಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. `ಭಾರತದ ಗಾನ ಕೋಗಿಲೆ’ ಎಂದು ಕರೆಯಲ್ಪಡುವ ಅವರು, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಬಹು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಲತಾ ಮಂಗೇಶ್ಕರ್ ಭಾರತ ಹಾಗೂ ವಿದೇಶಿ ಭಾಷೆಗಳು ಸೇರಿ ಒಟ್ಟು 36 ವಿವಿಧ ಭಾಷೆಗಳಲ್ಲಿ `ಗಾನಾಮೃತ’ ಹಂಚಿದ್ದಾರೆ. 1967ರಲ್ಲಿ ನಿರ್ಮಾಣವಾಗಿದ್ದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಕನ್ನಡ ಚಲನಚಿತ್ರದಲ್ಲಿ `ಬೆಳ್ಳನೆ ಬೆಳಗಾಯಿತು’ ಎಂಬ ಗೀತೆಯನ್ನು ಸುಮಧುರವಾಗಿ ಹಾಡಿದ್ದಾರೆ.

Translate »