ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ
ಮೈಸೂರು

ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ

June 18, 2020

ಮೈಸೂರು, ಜೂ.17(ಅರ್‍ಕೆಬಿ)- ಜೂ.25ರಿಂದ ಜು.4ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಜಿಲ್ಲಾದ್ಯಂತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. 12 ಹೆಚ್ಚುವರಿ ಕೇಂದ್ರಗಳು ಸೇರಿದಂತೆ ಜಿಲ್ಲೆ ಯಲ್ಲಿ ಒಟ್ಟು 139 ಪರೀಕ್ಷಾ ಕೇಂದ್ರಗಳಿದ್ದು, 39,822 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಪಾಂಡುರಂಗ ಮಾಹಿತಿ ನೀಡಿದರು.

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇ ಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂ ಗಣದಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ `ಕರ್ನಾಟಕ ಅಭಿವೃದ್ಧಿ ಕಾರ್ಯ ಕ್ರಮಗಳ ಮಾರ್ಚ್ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಮಾತನಾಡಿದ ಡಿಡಿಪಿಐ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಗೆ ತೆರಳಿರುವ ನಮ್ಮ ಜಿಲ್ಲೆಯ 849 ವಿದ್ಯಾರ್ಥಿಗಳು ಸದ್ಯ ಅವರು ತಂಗಿರುವ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ ಎಂದರು.

ಕೋವಿಡ್-19 ರೋಗಾಣು ಹರಡುವಿಕೆ ಭೀತಿ ಇರುವ ಹಿನ್ನೆಲೆಯಲ್ಲಿ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ವಿದ್ಯಾರ್ಥಿ ಗಳಿಗೆ ಉಚಿತವಾಗಿ ಮಾಸ್ಕ್ ಒದಗಿಸಲಾಗುವುದು. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾಮಾಜಿಕ ಅಂತರದಡಿ ಪರೀಕ್ಷೆ ನಡೆಸಲಾಗುತ್ತಿದೆ. ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪ್ರತಿ ಕೊಠಡಿಯಲ್ಲಿ 15ರಿಂದ 20 ವಿದ್ಯಾರ್ಥಿಗಳಿಗಷ್ಟೇ ಸ್ಥಳಾವಕಾಶ ಕಲ್ಪಿಸಲಾಗಿದೆ. ಅನಾರೋಗ್ಯದ ಲಕ್ಷಣ ಕಂಡು ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯು ಶಿಕ್ಷಣ ಇಲಾಖೆಗೆ 42,000 ಮಾಸ್ಕ್‍ಗಳನ್ನು ನೀಡಿದ್ದು, ಜೂ.19 ರಂದು ಎಲ್ಲಾ ಶಾಲೆಗಳಿಗೂ ಮಾಸ್ಕ್ ತಲುಪಿಸ ಲಾಗುವುದು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆಯೂ ಇರಲಿದೆ ಎಂದರು. ಜಿಪಂ ಉಪಾಧ್ಯಕ್ಷೆ ಮಂಗಳಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Translate »