ಇನ್ನು ಮುಂದೆ ಬಾರ್, ವೈನ್‍ಸ್ಟೋರ್ ಲೈಸೆನ್ಸ್ ನೀಡಿಕೆ, ನವೀಕರಣ ಆನ್‍ಲೈನ್ ವ್ಯವಸ್ಥೆ
ಮೈಸೂರು

ಇನ್ನು ಮುಂದೆ ಬಾರ್, ವೈನ್‍ಸ್ಟೋರ್ ಲೈಸೆನ್ಸ್ ನೀಡಿಕೆ, ನವೀಕರಣ ಆನ್‍ಲೈನ್ ವ್ಯವಸ್ಥೆ

June 14, 2018

ಮೈಸೂರು: ಬಾರ್, ಲಿಕ್ಕರ್ ಶಾಪ್ ಮತ್ತು ವೈನ್ ಸ್ಟೋರ್‍ಗಳ ಪರವಾನಗಿ ನವೀಕರಣ ಹಾಗೂ ಹೊಸ ಲೈಸೆನ್ಸ್‍ಗೆ ಆನ್‍ಲೈನ್ ವ್ಯವಸ್ಥೆ ಮಾಡಲು ರಾಜ್ಯ ಅಬಕಾರಿ ಇಲಾಖೆ ಮುಂದಾಗಿದೆ.

ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವಾಗ ಲಂಚ ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅಬಕಾರಿ ಇಲಾಖೆಯು, ಜುಲೈ ತಿಂಗಳಿಂದ ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಭಾರ ಮೈಸೂರು ವಿಭಾಗದ ಅಬಕಾರಿ ಉಪ ಆಯುಕ್ತ ಮಂಜುನಾಥ್ ಅವರು, ಆನ್‍ಲೈನ್ ವ್ಯವಸ್ಥೆ ಜಾರಿಗೆ ತರುತ್ತಿರುವುದರಿಂದ ಜುಲೈನಿಂದ ನೀಡುವ ಮ್ಯಾನ್ಯುಯಲ್ ಲೈಸೆನ್ಸ್ ಅನ್ನು ಸ್ಥಗಿತಗೊಳಿಸುವಂತೆ ಅಬಕಾರಿ ಆಯುಕ್ತರು ಸೂಚನೆ ನೀಡಿದ್ದಾರೆ ಎಂದರು.

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಇರುವ ವಿವಿಧ ವರ್ಗಗಳ ಮದ್ಯದಂಗಡಿಗಳಿಗೆ ಲಿಖಿತ ಮೂಲಕ ನೀಡುತ್ತಿದ್ದ ಲೈಸೆನ್ಸ್‍ಗಳನ್ನು ಇನ್ನು ಮುಂದೆ ಪ್ರತ್ಯೇಕ ಸಾಫ್ಟ್‍ವೇರ್ ಅಳವಡಿಸಿ, ಆನ್‍ಲೈನ್ ವ್ಯವಸ್ಥೆಯಡಿ ತರಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ನುಡಿದರು.

ಆನ್‍ಲೈನ್ ನವೀಕರಣ ವ್ಯವಸ್ಥೆಗಾಗಿ ಸಾಫ್ಟ್‍ವೇರ್ ಅಭಿವೃದ್ಧಿ ಗೊಳಿಸಲಾಗಿದೆ. ಇನ್ನು ಮುಂದೆ ಬಾರ್ ಮಾಲೀಕರು ಆನ್‍ಲೈನ್ ನಲ್ಲೇ ಅರ್ಜಿ ಸಲ್ಲಿಸಿ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳ ಬಹುದು. ಇದರಿಂದ ಅಕ್ರಮ ಹಾಗೂ ಲಂಚಗುಳಿತನ ತಡೆಗಟ್ಟಬಹುದು ಎಂದು ಅಬಕಾರಿ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಅಭಿಪ್ರಾಯಪಟ್ಟಿದ್ದಾರೆ. ಜುಲೈ 15 ರೊಳಗಾಗಿ ಸರ್ಕಾರ ಸುತ್ತೋಲೆ ಹೊರಡಿಸುವ ಸಾಧ್ಯತೆ ಇದ್ದು, ಅದುವರೆಗೆ ಮ್ಯಾನ್ಯು ಯಲ್ ಬಾರ್ ಲೈಸೆನ್ಸ್ ನೀಡುವ ಪ್ರಕ್ರಿಯೆ ತಡೆಹಿಡಿಯಲು ಅಬಕಾರಿ ಇಲಾಖೆ ನಿರ್ಧರಿಸಿದೆ.

Translate »