ಮೈಸೂರು, ಆ.9(ಆರ್‍ಕೆಬಿ)- ಮೈಸೂರಿನ ರಂಗಾಯಣ ಆವರಣದಲ್ಲಿ ನಿರ್ಮಿಸ ಲಾಗಿರುವ `ಬಿ.ವಿ.ಕಾರಂತ ರಂಗಚಾವಡಿ’ ಯನ್ನು ಬಹುಭಾಷಾ ಪಂಡಿತ, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರಧಾನ್ ಗುರುದತ್ತ ಸೋಮವಾರ ಉದ್ಘಾಟಿಸಿದರು.
ಭಾರತೀಯ ರಂಗ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೋಲು ಮತ್ತು ಕಂಸಾಳೆ ಯನ್ನು ಹಸ್ತಾಂತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಬಿ.ವಿ.ಕಾರಂತರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಕಾರಂತರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರದ್ದು ಅಪರೂಪದ ಅಸಾಧಾರಣ ಪ್ರತಿಭೆ. ಕಲಿಕೆ ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ಹೇಳುತ್ತಿ ದ್ದರು. ಪ್ರತಿಯೊಂದು ನಾಟಕವನ್ನು ಅದರ ವಿಶೇಷತೆ ಅಥವಾ ಹೊಸತನಕ್ಕಾಗಿ ವಿಶ್ಲೇಷಿಸುತ್ತಿದ್ದರು. ಅನೇಕ ಸಂದರ್ಭದಲ್ಲಿ ನಾನು ಮತ್ತು ಅವರು ಒಂದೇ ವೇದಿಕೆ ಯಲ್ಲಿ ಸೇರಿದ್ದನ್ನು ಸ್ಮರಿಸಿಕೊಂಡರು.
ಒಮ್ಮೆ ಉಡುಪಿಯಲ್ಲಿ ರಾತ್ರಿ 12 ಗಂಟೆಗೆ `ಬೈಸಿಕಲ್ ಥೀವ್ಸ್’ ನಾಟಕ ನಡೆಯುತ್ತದೆಂದು ನನ್ನನ್ನು ಕರೆದರು. ನಾವು ನಿದ್ದೆ ಬಿಟ್ಟು ನಾಟಕ ನೋಡಿದೆವು. ನಿದ್ದೆ ಬಿಟ್ಟು ನೋಡುವುದರ ಬಗ್ಗೆ ನಾನು ಅವರನ್ನು ಕೇಳಿದೆ. ಅದಕ್ಕವರು ಕಲಿಕೆಗೆ ಕೊನೆ ಇಲ್ಲ. ಇದನ್ನು ಇನ್ನಷ್ಟು ಉತ್ತಮಪಡಿ ಸಬಹುದೇ ಎಂಬುದು ಕಾರಂತರ ಚಿಂತನೆ ಯಾಗಿತ್ತು. ಇದರಿಂದ ಕಲಿಯುವ ಪಾಠ ಮತ್ತು ಅದನ್ನು ನಾವು ಅಳವಡಿಸಿ ಕೊಳ್ಳಲು ಸಾಧ್ಯವೇ ಎಂದು ನೋಡುತ್ತಿದ್ದೇನೆ. ಬೇರೆಯವರು ಕೂಡ ಇದನ್ನು ಅಳವಡಿಸಿ ಕೊಳ್ಳಬೇಕು ಎಂದು ಹೇಳುತ್ತಿದ್ದರು. ನಾನು ಅವರನ್ನು ಬಿವಿಕೆ ಎಂದರೆ `ಭಾರತದ ವೈಭವದ ಕೀರ್ತಿ ಪರಾಕಾಷ್ಟೆಯ ಸಂಕೇತ’ ಎನ್ನುತ್ತಿದೆ. ಅದಕ್ಕವರು ಹಾಗೆಲ್ಲಾ ಹೇಳಬೇಡ ಎಂದು ಪ್ರತಿಕ್ರಿಯಿಸಿದ್ದರು ಎಂದರು.
ಮೈಸೂರು ರಂಗಾಯಣ ಹಲವು ವರ್ಷಗಳಿಂದ ಉಳಿದಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂಕಷ್ಟಗಳ ನಡುವೆಯೂ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪಟ್ಟುಬಿಡದೆ ರಂಗ ಚಟುವಟಿಕೆಗಳನ್ನು ನಡೆಸುವ ಮೂಲಕ ರಂಗಾಯಣಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಡಾ.ಎಸ್.ಎಲ್. ಭೈರಪ್ಪನವರ ‘ಪರ್ವ’ ಕೃತಿಯನ್ನು ಬಹಳ ವ್ಯವಸ್ಥಿತವಾಗಿ ರಂಗದ ಮೇಲೆ ತಂದಿ ದ್ದಾರೆ. ಚಲನಚಿತ್ರ ನಿರ್ಮಾಪಕ ಬಿ.ಆರ್. ಚೋಪ್ರಾ `ಮಹಾ ಭಾರತ’ವನ್ನು ದೂರ ದರ್ಶನ ಪರದೆಯ ಮೇಲೆ ತರುವಲ್ಲಿ ಹೇಗೆ ಯಶಸ್ವಿಯಾದರೋ ಅದೇ ರೀತಿ ಅಡ್ಡಂಡ ಕಾರ್ಯಪ್ಪ `ಪರ್ವ’ವನ್ನು ರಂಗಕ್ಕೆ ತಂದು ಸಾಮಾನ್ಯ ಜನರಿಗೂ ತಲುಪುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಬಿ.ವಿ.ಕಾರಂತ ರಂಗಚಾವಡಿಯನ್ನು 8 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ನಿರ್ಮಾಣಕ್ಕೆ ಸಹಕರಿಸಿದ ಪೊನ್ನಂಪೇಟೆಯ ಟಿ.ವಿ.ಸುರೇಶ್ ಮತ್ತು ಗುತ್ತಿಗೆದಾರ ದೇವೇಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯ ಕ್ರಮದ ಆರಂಭದಲ್ಲಿ ಭಾರತೀಯ ರಂಗ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮಲೈ ಮಹದೇಶ್ವರನನ್ನು ಕುರಿತ ಹಾಡುಗಳಿಗೆ ಕಂಸಾಳೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಮೈಸೂರು ಹವ್ಯಾಸಿ ರಂಗತಂಡ ಗಳ ಒಕ್ಕೂಟದ ಅಧ್ಯಕ್ಷ ಹೆಚ್.ಎಸ್. ಸುರೇಶ್‍ಬಾಬು ಇನ್ನಿತರರು ಉಪಸ್ಥಿತರಿದ್ದರು.