ಲ್ಯಾನ್ಸ್‍ಡೌನ್ ಕಟ್ಟಡದ ಮುಂದೆ ಹೊಸ ಚೈನ್ ಫೆನ್ಸ್ ಅಳವಡಿಕೆ
ಮೈಸೂರು

ಲ್ಯಾನ್ಸ್‍ಡೌನ್ ಕಟ್ಟಡದ ಮುಂದೆ ಹೊಸ ಚೈನ್ ಫೆನ್ಸ್ ಅಳವಡಿಕೆ

August 31, 2020

ಮೈಸೂರು, ಆ.30(ಎಂಟಿವೈ)- ಶಿಥಿಲಗೊಂಡಿ ರುವ ಮೈಸೂರಿನ ಲ್ಯಾನ್ಸ್‍ಡೌನ್ ಕಟ್ಟಡದಲ್ಲಿ ಮುಂದೆ ನಗರ ಪಾಲಿಕೆ ಹೊಸದಾಗಿ ಚೈನ್ ಫೆನ್ಸಿಂಗ್ ಅಳ ವಡಿಸಿದ್ದು, ಕಟ್ಟಡಕ್ಕೆ ಅಕ್ರಮ ನುಸುಳುವಿಕೆ ಹಾಗೂ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿದೆ.

ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ನಲ್ಲಿ ಮೇಲ್ಛಾವಣಿ 2012ರ ಆಗಸ್ಟ್‍ನಲ್ಲಿ ಕುಸಿದು ನಾಲ್ವರು ಮೃತಪಟ್ಟಿದ್ದರು. 128 ವರ್ಷಗಳ ಇತಿಹಾಸ ಹೊಂದಿರುವ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕಳೆದ 8 ವರ್ಷ ದಿಂದ ಕಟ್ಟಡದ ಬಳಿ ನುಸುಳದಂತೆ `ತಗಡಿನ ಶೀಟ್’ ಬಳಸಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆ, ಗಾಳಿಗೆ ತಗಡಿನ ಬ್ಯಾರಿಕೇಡ್ ಕೆಲವೆಡೆ ನೆಲಕ್ಕುರುಳಿತ್ತು. ಮತ್ತೆ ಕೆಲವೆಡೆ ಜನರೇ ಬ್ಯಾರಿಕೇಡ್ ತೆರವುಗೊಳಿಸಿ ರಾತ್ರಿ ವೇಳೆ ಕಟ್ಟಡ ಹೊಕ್ಕಿ ಅನೈತಿಕ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಅಲ್ಲದೆ ತಗಡಿನ ಹಿಂಭಾಗಕ್ಕೆ ಸ್ಥಳೀಯ ಮಳಿಗೆಗಳಲ್ಲಿ ಉತ್ಪತ್ತಿ ಯಾಗುತ್ತಿದ್ದ ಪ್ಲಾಸ್ಟಿಕ್ ಕವರ್ ಸೇರಿದಂತೆ ಕಸ ಎಸೆಯುತ್ತಿದ್ದರು. ಇದರಿಂದ ಕಟ್ಟಡದ ಮುಂಭಾಗದ ವಾತಾವರಣ ಕಲುಷಿತಗೊಂಡಿತ್ತು.

ಕಟ್ಟಡದ ಅಂದ ಹೆಚ್ಚಿಸಿದ ಫೆನ್ಸಿಂಗ್: ಕಳೆದ 8 ವರ್ಷದ ಹಿಂದೆ ಅಳವಡಿಸಿದ್ದ ತಗಡು ಶೀಟಿನ ಬ್ಯಾರಿ ಕೇಡ್ ಹಿಂದೆ ರಾಶಿಗಟ್ಟಲೆ ಕಸ ಸಂಗ್ರಹವಾಗಿತ್ತು. ಕೆಲವು ದಿನಗಳ ಹಿಂದೆ ತಡೆಗೋಡೆ ನೆಲಕ್ಕುರುಳಿದ್ದ ರಿಂದ ಮೊದಲ ಶಿಥಿಲಗೊಂಡಿದ್ದ ಕಟ್ಟಡ ಅಂದ ಕೆಡಿಸಿತ್ತು. ಇದೀಗ ಕಟ್ಟಡದ ಮುಂಭಾಗದ ಹೊಸದಾಗಿ ಚೈನ್‍ಫೆನ್ಸಿಂಗ್ ಅಳವಡಿಸಿದ್ದರಿಂದ ಲ್ಯಾನ್ಸ್‍ಡೌನ್ ಕಟ್ಟಡದ ಎಲ್ಲಾ ಮಳಿಗೆಗಳು ದಾರಿ ಹೋಕರಿಗೆ ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಗಬ್ಬೆದ್ದು ನಾರುತ್ತಿದ್ದ ವಾತಾವರಣ ತಿಳಿಗೊಳಿಸಲು ಪಾಲಿಕೆ ಕೈಗೊಂಡಿರುವ ಕ್ರಮ ಸಮಂಜಸವಾಗಿದೆ. ಗತಕಾಲದಲ್ಲಿ ತನ್ನದೇ ಆದ ವೈಭವ ಹೊಂದಿದ್ದ ಲ್ಯಾನ್ಸ್‍ಡೌನ್ ಕಟ್ಟಡ ಹೇಗಿತ್ತು? ಎನ್ನುವುದನ್ನು ದೂರದಿಂದಲೇ ನೋಡುವ ಅವಕಾಶ ಜನರಿಗೆ ದೊರೆತಂತಾಗಿದೆ.

7 ಲಕ್ಷ ರೂ. ವೆಚ್ಚ: ಜಗನ್ಮೋಹನ ಅರಮನೆಯ ರಸ್ತೆ ಜಂಕ್ಷನ್‍ನಿಂದ ಕೆ.ಆರ್.ವೃತ್ತದ ಕಡೆಗಿನ ಲ್ಯಾನ್ಸ್ ಡೌನ್ ಕಟ್ಟಡದ ಅಂಚಿನವರೆಗೂ 700 ಮೀಟರ್ ಉದ್ದ ಚೈನ್‍ಫೆನ್ಸಿಂಗ್ ಅನ್ನು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇರುವ ಸಂಪನ್ಮೂಲ ಬಳಕೆ ಮಾಡಿಕೊಂಡು 5 ಅಡಿ ಎತ್ತರದ ಫೆನ್ಸಿಂಗ್ ಅಳವಡಿಸಲಾಗಿದೆ. ಕಬ್ಬಿಣದ ಪೋಲ್ ಅನ್ನು ನೆಟ್ಟು ಸಿಮೆಂಟ್ ನಿಂದ ಭದ್ರಪಡಿಸಲಾಗಿದೆ. ಇದರಿಂದ ಗಾಳಿ, ಮಳೆಗೆ ಬೀಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಸಿರು ಬಣ್ಣ ಹೊಡೆದಿರುವುದರಿಂದ ನೋಡುವುದಕ್ಕೂ ಚೆನ್ನಾಗಿ ಕಾಣಲಿದೆ. ಇದಕ್ಕನುಗುಣವಾಗಿ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸೂಚನೆ ಮೇರೆಗೆ ವಲಯ ಕಚೇರಿ-6ರ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಕಟ್ಟಡದ ಮುಂದ ಹಲವು ವರ್ಷದಿಂದ ಸಂಗ್ರಹವಾಗಿದ್ದ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛತೆ ಕ್ರಮ ಕೈಗೊಂಡಿದ್ದಾರೆ.

Translate »