`ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಸಚಿವ ಎಸ್‍ಟಿಎಸ್ ಚಾಲನೆ
ಮೈಸೂರು

`ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಸಚಿವ ಎಸ್‍ಟಿಎಸ್ ಚಾಲನೆ

April 28, 2021

ಮೈಸೂರು, ಏ.27(ಎಂಕೆ)- ಮೈಸೂರಿನ ಅಜೀಜ್‍ಸೇಠ್ ನಗರ ದಲ್ಲಿರುವ `ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಕೇಂದ್ರೀಯ ಆಸ್ಪತ್ರೆ’ಯಲ್ಲಿ ತೆರೆದಿ ರುವ `ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮಂಗಳವಾರ ಚಾಲನೆ ನೀಡಿದರು. ಬಳಿಕ ಸೋಂಕಿತರ ಚಿಕಿತ್ಸೆ ಗಾಗಿ ಸಿದ್ಧಪಡಿಸಿರುವ ಹಾಸಿಗೆಗಳು ಮತ್ತು ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆ ಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಅಗತ್ಯ ಸಲಕರಣೆಗಳನ್ನು ತ್ವರಿತವಾಗಿ ಪೂರೈಸುವಂತೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅಜೀಜ್ ಸೇಠ್ ಅವರ ಕೊಡುಗೆ ನೆನೆಯಲೇಬೇಕು. ಅವರು ಬೀಡಿ ಕಾರ್ಮಿ ಕರಿಗೆ ಬೇಕಾದ ಸವಲತ್ತುಗಳನ್ನು ಒದಗಿ ಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಎನ್‍ಆರ್ ಕ್ಷೇತ್ರದಲ್ಲಿ ವಿಶಾಲ ಪ್ರದೇಶ ದಲ್ಲಿರುವ ಬೀಡಿ ಕಾರ್ಮಿಕರ ಆಸ್ಪತ್ರೆಯೂ ಅಜೀಜ್ ಸೇಠ್ ಅವರ ಕೊಡುಗೆ. ಅವರ ಮಗ ತನ್ವೀರ್ ಸೇಠ್ ಕೂಡಾ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಕೊರೊನಾ ಸೋಂಕಿನ ಮೊದಲ ಅಲೆ ಸಂದರ್ಭ ದಲ್ಲೇ ಈ ಆಸ್ಪತ್ರೆಯನ್ನು ಬಳಕೆ ಮಾಡಿ ಕೊಳ್ಳುವ ಬಗ್ಗೆ ತನ್ವೀರ್ ಸಲಹೆ ನೀಡಿ ದ್ದರು ಎಂದು ಸಚಿವರು ವಿವರಿಸಿದರು.

ಇನ್ನೆರಡು ದಿನದಲ್ಲಿ `ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಅಗತ್ಯ ಸಲಕರಣೆಗಳು ಪೂರೈಕೆಯಾಗಲಿವೆ. ಈ ಸೆಂಟರ್ ಅನ್ನು ಶಾಶ್ವತವಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಚಿಂತಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಇದಕ್ಕೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ಸೋಮಶೇಖರ್ ತಿಳಿಸಿದರು. ಶಾಸಕ ತನ್ವೀರ್ ಸೇಠ್ ಮಾತನಾಡಿ, ಈ ಭಾಗದ ಜನರ ಬೇಡಿಕೆಯಂತೆ ಕೇಂದ್ರ ಕಾರ್ಮಿಕ ಇಲಾಖೆಗೆ ಸೇರಿದ `ಬೀಡಿ ಕಾರ್ಮಿಕರ ಆಸ್ಪತ್ರೆ’ಯನ್ನು `ಕೋವಿಡ್ ಕೇರ್ ಸೆಂಟರ್’ ಆಗಿ ಪರಿವರ್ತಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಭೆಯಲ್ಲಿಯೇ ಈ ಬಗ್ಗೆ ನಿರ್ಧರಿಸಲಾಗಿತ್ತು. ಈ ಸೆಂಟರ್ ನಲ್ಲಿ ಸದ್ಯ 16 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮುಡಾ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನೂ 75 ಆಕ್ಸಿಜನ್ ಬೆಡ್‍ಗಳು ಸೇರ್ಪಡೆಯಾಗಿ 100 ಆಕ್ಸಿಜನ್ ಬೆಡ್‍ಗಳ ಆಸ್ಪತ್ರೆ ಹಾಗೂ 200 ಬೆಡ್‍ಗಳಿರುವ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು ಎಂದು ಹೇಳಿದರು.
ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಉಪ ಮೇಯರ್ ಅನ್ವರ್ ಬೇಗ್, ಪಾಲಿಕೆ ಸದಸ್ಯ ಬಷೀರ್ ಅಹಮದ್, ಆಯಾಜ್ ಪಾಷ, ಶೌಕತ್ ಅಲಿಖಾನ್, ಷಹಾ ಬುದ್ದೀನ್ ಇನ್ನಿತರರಿದ್ದರು.

Translate »