ಕಾಂಗ್ರೆಸ್ ಅಧಿಕಾರಕ್ಕೇರಿದ ದಿನವೇ 10 ಕೆ.ಜಿ. ಅಕ್ಕಿ, ಪ್ರತಿಮನೆಗೆ 200 ಯೂನಿಟ್ ವಿದ್ಯುತ್, ಮನೆ ಯಜಮಾನಿಗೆ 2 ಸಾವಿರ ಘೋಷಣೆ
ಮಂಡ್ಯ

ಕಾಂಗ್ರೆಸ್ ಅಧಿಕಾರಕ್ಕೇರಿದ ದಿನವೇ 10 ಕೆ.ಜಿ. ಅಕ್ಕಿ, ಪ್ರತಿಮನೆಗೆ 200 ಯೂನಿಟ್ ವಿದ್ಯುತ್, ಮನೆ ಯಜಮಾನಿಗೆ 2 ಸಾವಿರ ಘೋಷಣೆ

January 28, 2023

ಮಂಡ್ಯ, ಜ.27(ಮೋಹನ್‍ರಾಜ್)- ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನವೇ ನಾವು ಘೋಷಿಸಿರುವ 3 ಮಹತ್ವದ ಯೋಜನೆಗಳಾದ ಅನ್ನಭಾಗ್ಯ ಅಕ್ಕಿಯನ್ನು 7ರಿಂದ 10 ಕೆಜಿಗೆ ಏರಿಸುವುದು. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ನೀಡುವ ಯೋಜನೆಯನ್ನು ಈಡೇರಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣ ದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬಹು ನಿರೀಕ್ಷಿತ ಪ್ರಜಾಧ್ವನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾ ಗಿದ್ದ ಅವಧಿಯಲ್ಲಿ ಘೋಷಿಸಿದ್ದ ಪ್ರತಿ ಮನೆಯ ಸದಸ್ಯರೊಬ್ಬರಿಗೆ ತಲಾ 7 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ಸರ್ಕಾರ 5 ಕೆಜಿಗೆ ಇಳಿಸಿದೆ. ಈ ನಿಟ್ಟಿನಲ್ಲಿ ಜನರಿಗೆ ಅನು ಕೂಲವಾಗುವ ಯೋಜನೆಗಳನ್ನು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರೂಪಿಸಲು ನಿರ್ಧರಿಸಿದ್ದು, ನಮ್ಮ ಭರವಸೆಗಳನ್ನು ನೋಡಿ ಬಿಜೆಪಿ-ಜೆಡಿಎಸ್‍ಗೆ ಭ್ರಮ ನಿರಸನವಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಎಂದೂ ಕೊಟ್ಟ ಮಾತು ತಪ್ಪಿಲ್ಲ. ಒಂದು ವೇಳೆ ನಾವು ಕೊಟ್ಟ ಮಾತಿನಂತೆ ನಡೆದು ಕೊಳ್ಳದಿದ್ದರೆ ರಾಜಕೀಯದಲ್ಲೇ ಇರುವುದಿಲ್ಲ ಎಂದ ಅವರು, ವರ್ಷಕ್ಕೆ ಮೂರೂವರೆ ಲಕ್ಷ ಟನ್ ಕಬ್ಬು ಬೆಳೆಯುವ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕೇಳುವವರೇ ದಿಕ್ಕಿಲ್ಲ. ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಮುರು ಗೇಶ್ ನಿರಾಣಿ ಕಾರ್ಖಾನೆಯನ್ನು ಕೊಂಡುಕೊಳ್ಳಲು ಹೊಂಚು ಹಾಕಿದ್ದರು. ಈ ಭಾಗದ ರೈತರ ಜೊತೆಗೆ ನಾವು ಸಹ ಹೋರಾಟ ಮಾಡಿದ ಫಲ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿದಿದೆ ಎಂದರು. ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿದರೂ ಕಬ್ಬು ಅರೆಯಲು ಸಾಧ್ಯವಾಗುತ್ತಿಲ್ಲ. ಕಾರ್ಖಾನೆಯನ್ನು ನಂಬಿ ಕಬ್ಬು ಬೆಳೆದ ರೈತರು ಅಕ್ಕಪಕ್ಕದ ಕಾರ್ಖಾನೆಗಳಿಗೆ ಕಡಿಮೆ ಬೆಲೆಗೆ ಕಬ್ಬು ಸರಬರಾಜು ಮಾಡುವಂತಾಗಿದೆ. ಹಿಂದೆ ಅಧಿಕಾರದಲ್ಲಿದ್ದ ಕುಮಾರಸ್ವಾಮಿ ಅವಧಿ ಯಲ್ಲೇ ಕಾರ್ಖಾನೆ ಅಧಃಪತನವಾಗಿದ್ದು, ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಮೈಷುಗರ್ ಅನ್ನು ಅತ್ಯಾಧುನೀಕರಣ ಮಾಡಿ, ಕಬ್ಬು ಅರೆಯುವಿಕೆ ಆರಂಭಿಸುತ್ತೇವೆ. ಜೊತೆಗೆ ಲಿಕ್ಕರ್, ಕೋಜನ್ ಘಟಕ ಪುನರಾರಂಭಿ ಸುತ್ತೇವೆ ಎಂದು ಭರವಸೆ ನೀಡಿದರು. ಗಂಡುಮೆಟ್ಟಿದ ನಾಡು ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ 5-6 ಸ್ಥಾನಗಳನ್ನು ಗೆಲ್ಲಲಿದ್ದು, ರಾಜ್ಯದಲ್ಲೂ ಬಹುಮತದಿಂದ ಅಧಿಕಾರಕ್ಕೆ ಬರಲಿ ದ್ದೇವೆ ಎಂದು ಭವಿಷ್ಯ ನುಡಿದ ಅವರು, ಮಂಡ್ಯ ಜಿಲ್ಲೆಯ ಜನರು ಜೆಡಿಎಸ್ ಹಾಗೂ ಬಿಜೆಪಿಯನ್ನು ನಂಬದಿರಿ. ಜಿಲ್ಲೆಯಲ್ಲಿ ನಮಗೂ ಹಾಗೂ ಜೆಡಿಎಸ್ ನಡುವೆ ಹಣಾಹಣಿ ನಡೆಯಲಿದ್ದು, ಕಳೆದ ಬಾರಿ ಕಾರಣಾಂತರಗಳಿಂದ 7 ಸೀಟು ಗೆದ್ದಿದ್ದ ಜೆಡಿಎಸ್‍ಗೆ ಈ ಬಾರಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಸರ್ಕಾರ ಬೀಳಲು ಕಾರಣ ಸಿದ್ದರಾಮಯ್ಯ ಎಂಬ ಆರೋಪಿಸುತ್ತಾರೆ. ನಮ್ಮ ಪಕ್ಷದ ಅನೇಕ ಶಾಸಕರೇನೋ ಬಿಜೆಪಿ ಸೇರಿದರು. ನಿಮ್ಮ ಪಕ್ಷದ 3 ಮಂದಿ ಶಾಸಕರು ಸಹ ಬಿಜೆಪಿ ಸರ್ಕಾರ ಬರಲು ಕಾರಣರಾದರು. ನಿಮ್ಮ ಪಕ್ಷದ ಶಾಸಕರಿಗೆ ಬಿಜೆಪಿಗೆ ಹೋಗಿ ಎಂದು ನಾನು ಹೇಳಿದ್ದೆನಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನರ ನಡುವೆ, ಅಧಿಕಾರಿಗಳ ನಡುವೆ ಇರುವುದನ್ನು ಬಿಟ್ಟು ತಾಜ್ ವೆಸ್ಟೆಂಡ್‍ನಲ್ಲಿ ಐಷಾರಾಮಿ ಜೀವನ ನಡೆಸಲು ಹೋಗಿ ಸರ್ಕಾರ ಪತನವಾಗುವಂತೆ ಮಾಡಿಕೊಂಡರು ಎಂದು ಕಿಡಿಕಾರಿದರು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಹಾಗಿದ್ದರೂ ಕುಮಾರಸ್ವಾಮಿ 123 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಾ ಇದ್ದಾರೆ. ನಾನು ಜೆಡಿಎಸ್‍ನಲ್ಲಿದ್ದಾಗಲೇ ಪಕ್ಷ 59 ಮಂದಿ ಗೆದ್ದಿತ್ತು. ಅದಾದ ಬಳಿಕ 29, 37 ಹೀಗೆ ಗೆಲ್ಲುತ್ತಾ ಬಂದಿದ್ದು, ಈ ಬಾರಿ ಜೆಡಿಎಸ್ 20-22 ಸೀಟು ಗೆದ್ದರೂ ದೊಡ್ಡ ಸಾಧನೆ. ಈ ನಿಟ್ಟಿನಲ್ಲಿ ಮಂಡ್ಯ ಜನ ಜೆಡಿಎಸ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಡಿಕೆಶಿಗೆ ಗೂಳಿ ಉಡುಗೊರೆ: ಸಮಾವೇಶ ಆರಂಭವಾಗುವ ಮುನ್ನ ಡಿಕೆಶಿ ಅಭಿಮಾನಿ ತಂದಿದ್ದ ಗೂಳಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಉಡುಗೊರೆ ಯಾಗಿ ನೀಡಿ, ಗೂಳಿಗೆ ಬಂಡೆ ಎಂದು ನಾಮಕರಣ ಮಾಡಲಾಯಿತು.

ಸ್ಥಳೀಯ ಮುಖಂಡರ ಪರಿಶ್ರಮದಿಂದ ಯಶಸ್ವಿ: ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಡಾ.ಕೃಷ್ಣ, ಕೀಲಾರ ರಾಧಾಕೃಷ್ಣ, ಗಣಿಗ ರವಿಕುಮಾರ್, ವಿಜಯರಾಮೇಗೌಡ, ಎಂ.ಎಸ್.ಚಿದಂಬರ್ ಸೇರಿದಂತೆ ಹಲವು ಮುಖಂಡರಿಗೆ ಪ್ರಜಾಧ್ವನಿ ಯಾತ್ರೆ ಯಶಸ್ವಿಗೆ ಒಂದೊಂದು ಜವಾಬ್ದಾರಿ ಕೊಡಲಾಗಿತ್ತು. ಎಲ್ಲಾ ಮುಖಂಡರು ಚಾಚು ತಪ್ಪದೇ ತಮ್ಮ ಜವಬ್ದಾರಿ ನಿರ್ವಹಿಸಿದ್ದರಿಂದ ಸಮಾವೇಶ ಸಂಪೂರ್ಣ ಯಶಸ್ವಿಯಾಯಿತು. ಇದೇ ವೇಳೆ ಜೆಡಿಎಸ್ ತೊರೆದು ಹಲವರು ಕಾಂಗ್ರೆಸ್ ಸೇರಿದರು.

Translate »