ಅತ್ಯಾಚಾರಿಗೆ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ
ಮೈಸೂರು

ಅತ್ಯಾಚಾರಿಗೆ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ

November 5, 2020

2016ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದವನಿಗೆ ಮೈಸೂರಿನ 1ನೇ ಅಧಿಕ ಜಿಲ್ಲಾ-ಸತ್ರ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
ಮೈಸೂರು, ನ.4(ವೈಡಿಎಸ್)- ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಮೈಸೂರಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.
ಹೆಚ್.ಡಿ.ಕೋಟೆ ತಾಲೂಕು ಮಚ್ಚರೆ ನಿವಾಸಿ ಮಹದೇವ ಶಿಕ್ಷೆಗೊಳಗಾದವನು.

2016ರ ಸೆ.17ರ ಸಂಜೆ 4.30ರ ವೇಳೆ ಬಾಲಕಿ, ಸಹೋದರನೊಂದಿಗೆ ಆಟವಾಡುತ್ತಾ ಆರೋಪಿ ಮಹದೇವನ ಮನೆ ಬಳಿ ಹೋಗಿದ್ದಾಳೆ. ಈ ವೇಳೆ ಮಹದೇವ, ಬಾಲಕಿಯ ಅಣ್ಣನಿಗೆ ಮೊಬೈಲ್ ಫೋನ್ ನೀಡಿ, ಆಟವಾಡಿಕೊ ಎಂದು ಹೇಳಿ ಕಳುಹಿಸಿದ್ದಾನೆ. ನಂತರ, ತಿನ್ನಲು ತಿಂಡಿ ಕೊಡುವುದಾಗಿ ಬಾಲಕಿಯನ್ನು ಪುಸಲಾಯಿಸಿ ಮನೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಾಲಕಿ ಪೋಷಕರು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಪೋಕ್ಸೊ ಕಾಯ್ದೆಯಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು, ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಆದೇಶಿಸಿ ದ್ದಾರೆ. ಇದೇ ವೇಳೆ, ನೊಂದ ಬಾಲಕಿಗೆ 5 ಲಕ್ಷ ರೂ. ಪರಿಹಾರ ಒದಗಿಸುವಂತೆ ಸರ್ಕಾರದ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಿವರುದ್ರಸ್ವಾಮಿ ಮತ್ತು ಎಂ.ಎಸ್.ಮಂಜುಳಾ ವಾದಿಸಿದ್ದರು.

 

 

 

Translate »