ವೆಂಟಿಲೇಟರ್ ಸಹಿತ 100 ಬೆಡ್ ವ್ಯವಸ್ಥೆ: ತಹಸೀಲ್ದಾರ್
ಮೈಸೂರು

ವೆಂಟಿಲೇಟರ್ ಸಹಿತ 100 ಬೆಡ್ ವ್ಯವಸ್ಥೆ: ತಹಸೀಲ್ದಾರ್

April 22, 2021

ಹುಣಸೂರು,ಏ.21(ಕೆಕೆ)-ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ನಲ್ಲೂ ತಲಾ 50 ಬೆಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಚಿಕಿತ್ಸೆಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೋವಿಡ್ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಬಸವರಾಜ್ ಸ್ಪಷ್ಟಪಡಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿನ ವೆಂಟಿಲೇಟರ್ ಸಹಿತ 50 ಬೆಡ್‍ಗಳ ವ್ಯವಸ್ಥೆ ವೀಕ್ಷಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಕೊರೊನಾ ಎರಡನೇ ಅಲೆ ಹರಡುವಿಕೆ ವೇಗ ಪಡೆಯುತ್ತಿದ್ದು, ಈಗಾಗಲೇ ತಾಲೂಕಿನ 5 ಮಂದಿಯನ್ನು ಆಹುತಿ ಪಡೆದಿದೆ. ಇದುವರೆಗೂ ಒಟ್ಟು 37 ಮಂದಿ ಸಾವನ್ನಪ್ಪಿದಂತಾಗಿದೆ ಎಂದರು.

100 ಬೆಡ್‍ಗಳ ವಾರ್ಡ್ ಸಜ್ಜು: ಜಿಲ್ಲಾಡಳಿತದ ಸೂಚನೆಯಂತೆ ಚಿಕ್ಕ ಹುಣಸೂರು ಬಳಿಯ ಆದರ್ಶ ಶಾಲೆಯ ವಸತಿ ನಿಲಯದಲ್ಲಿ ಮತ್ತೆ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ತುರ್ತು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಅಕ್ಸಿಜನ್ ಸಹಿತ 50 ಬೆಡ್‍ಗಳ ಸುಸಜ್ಜಿತ ವಾರ್ಡ್ ಸ್ಥಾಪಿಸಲಾಗಿದೆ. ಸೋಂಕಿತರು ಹೋಂ ಐಸೋಲೇಷನ್ ವ್ಯವಸ್ಥೆ ಇಲ್ಲದವರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅಗತ್ಯ ಉಳ್ಳವರಿಗೆ ಮಾತ್ರ ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿ ಸಜ್ಜುಗೊಳಿಸಲಾಗಿದೆ. ಈಗಾಗಲೇ 6 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಓ ಗಿರೀಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇಅರಸ್ ಉಪಸ್ಥಿತರಿದ್ದರು.

Translate »