ಕೆ.ಆರ್.ನಗರ: ಅಗ್ನಿಶಾಮಕ ದಳದಿಂದ ಸೇವಾ ಸಪ್ತಾಹ
ಮೈಸೂರು

ಕೆ.ಆರ್.ನಗರ: ಅಗ್ನಿಶಾಮಕ ದಳದಿಂದ ಸೇವಾ ಸಪ್ತಾಹ

April 22, 2021

ಕೆ.ಆರ್.ನಗರ, ಏ.21(ಕೆಟಿಆರ್)-ಅಗ್ನಿಶಾಮಕ ದಳ ಸೇವಾ ಸಪ್ತಾಹ ಅಂಗವಾಗಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕ ದಳದಿಂದ ಖಾಸಗಿ ವಾಹನಗಳ ಚಾಲಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಕರಪತ್ರ ವಿತರಿಸುವ ಮೂಲಕ ಅಗ್ನಿ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಬಿ.ಸಿ.ರಾಮಚಂದ್ರ, ಅಗ್ನಿ ಶಾಮಕ ದಳದಿಂದ ದೇಶಾದ್ಯಂತ ಸಪ್ತಾಹ ಆಚರಿಸುವ ಮೂಲಕ ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿ ದಾನಗೈದ ಅಗ್ನಿ ಶಾಮಕ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ ಎಂದರು.

1944ರ ಏ.14ರಂದು ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‍ನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಎಸ್‍ಎಸ್ ಪೋರ್ಟ್ ಸ್ಟ್ರೈಕೈನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಯಿತು. ಆ ಬೆಂಕಿಯನ್ನು ನಂದಿಸಲು ಮುಂಬೈ ಫೈರ್ ಬ್ರಿಗೇಡ್‍ನ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಫೋಟಗೊಂಡು 66 ಮಂದಿ ವೀರ ಮರಣ ಹೊಂದಿದರು. ಅವರ ನೆನಪಿಗಾಗಿ ಏ.14ರಂದು ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಏ.14 ರಿಂದ ಏ.20 ರವರೆಗೆ ಸಪ್ತಾಹವನ್ನು ದೇಶದಾದ್ಯಂತ ಆಚರಿಸುವ ಮೂಲಕ ಅಗ್ನಿಶಾಮಕ ಸೇವಾ ಸಪ್ತಾಹ ನಡೆಸಲಾಗುತ್ತದೆ. ಇದರಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡಿ ಅಗ್ನಿ ಶಮನ ವಿಚಾರಗಳ ಬಗ್ಗೆ ಅಣುಕು ಪ್ರದರ್ಶನ ಆಯೋಜಿಸ ಲಾಗುತ್ತದೆ ಎಂದರು. ಈ ವೇಳೆ ಸಿಬ್ಬಂದಿ ನಾಗೇಶ್, ಶಿವಮೂರ್ತಿ, ಶಿವಪ್ಪ, ಮಧು ಇದ್ದರು.

Translate »