ಮೈಸೂರು,ಏ.21(ಪಿಎಂ)- ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ದಂಡ ವಿಧಿಸುವುದೂ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ನಗರದ ಚಿಕ್ಕ ಗಡಿಯಾರ ವೃತ್ತ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು.
ಚಿಕ್ಕ ಗಡಿಯಾರ ವೃತ್ತದಿಂದ ಕಾರ್ಯಾ ಚರಣೆ ಆರಂಭಿಸಿ, ಶಿವರಾಂಪೇಟೆಯ ವಿನೋಬಾ ರಸ್ತೆ, ಮನ್ನಾರ್ಸ್ ಮಾರ್ಕೆಟ್, ಡಿ.ದೇವರಾಜ ಅರಸು ರಸ್ತೆ, ಹಳೇ ಸಂತೆಪೇಟೆ ಸೇರಿದಂತೆ ಮತ್ತಿತರ ಕಡೆ ಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳ ದವರಿಗೆ ದಂಡ ವಿಧಿಸಲಾಯಿತು. ಈ ವೇಳೆ ಮಾಸ್ಕ್ ಧರಿಸಿದ್ದರೂ ಮೂಗಿನ ಕೆಳಗೆ ಹಾಕಿದ್ದವರಿಗೂ ದಂಡ ವಿಧಿಸ ಲಾಯಿತು. ಅಲ್ಲದೆ, ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸುವಂತೆ ತಿಳುವಳಿಕೆ ಹೇಳಿ, ಮಾಸ್ಕ್‍ಗಳನ್ನೂ ನೀಡಲಾಯಿತು.
ಇದೇ ವೇಳೆ ಮಾಸ್ಕ್ ಧರಿಸದ ತಳ್ಳೂ ಗಾಡಿಯ ಹಣ್ಣಿನ ವ್ಯಾಪಾರಿಯೊಬ್ಬರಿಗೆ ದಂಡ ವಿಧಿಸುವ ವೇಳೆ ಅವರ ಬಳಿ ಒಂದೆರಡು ನಿಷೇಧಿತ ಪ್ಲಾಸ್ಟಿಕ್ ಕವರ್ ಇದ್ದದನ್ನು ಕಂಡ ಪಾಲಿಕೆ ಆಯುಕ್ತರು ಗರಂ ಆದರಲ್ಲದೆ, ಪ್ಲಾಸ್ಟಿಕ್ ಕವರ್ ಬಳಸ ದಂತೆ ಎಚ್ಚರಿಕೆ ನೀಡಿದರು.
ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತರು, ಮಾಸ್ಕ್ ಧರಿಸದವ ರಿಗೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ತಲಾ 250 ರೂ. ದಂಡ ವಿಧಿಸಲಾಗುತ್ತಿದೆ. ಕೆಲವರು ಕೋವಿಡ್ ಮಾರ್ಗಸೂಚಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ಕಂಡು ಬರುತ್ತಿದೆ. ತೀವ್ರತರದಲ್ಲಿ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆ ಸ್ಥಳ ಗಳಲ್ಲಿ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸ ಲಾಗುತ್ತಿದೆ. ಎಲ್ಲಾ ಆರ್ಥಿಕ ಚಟುವಟಿಕೆ ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಪರಿಣಾಮಕಾರಿಯಾಗಿ ನಿಯಮ ಗಳನ್ನು ಅನುಷ್ಠಾನಗೊಳಿಸಿ ಸೋಂಕು ನಿಯಂತ್ರಿಸಲು ಸರ್ಕಾರದಿಂದ ಸೂಚನೆ ಬಂದಿದೆ ಎಂದು ತಿಳಿಸಿದರು.
ಈ ಸನ್ನಿವೇಶದಲ್ಲಿ ಜನರಿಂದ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬು ದಕ್ಕೆ ಪ್ರತಿಕ್ರಿಯಿಸಿ, ಜನರು ಬಹುತೇಕ ಮಾಸ್ಕ್ ಧರಿಸುತ್ತಿದ್ದಾರೆ. ನಿರ್ಬಂಧಗಳಿಗೆ ಸಂಬಂಧಿಸಿದಂತೆ ಜನತೆಯಿಂದ ಸಹಕಾರ ಇದೆ. ಕೋವಿಡ್ ಪರೀಕ್ಷೆ ಕೂಡ ಹೆಚ್ಚಿಸ ಲಾಗಿದೆ. ಆದರೂ ಇನ್ನು ಹೆಚ್ಚಿನ ಸಹ ಕಾರ ಅಗತ್ಯವಾಗಿದೆ. ಹೊಸ ಮಾರ್ಗ ಸೂಚಿ ಅನ್ವಯ ವಾರಾಂತ್ಯದಲ್ಲಿ ಕಫ್ರ್ಯೂ ಇರಲಿದ್ದು, ಬೇರೆ ದಿನಗಳಲೂ ಹಲವು ಕಟ್ಟುನಿಟ್ಟಿನ ನಿರ್ಬಂಧ ವಿಧಿಸುವುದು ಅನಿ ವಾರ್ಯವಾಗಿದೆ ಎಂದರು.
ಮಾರುಕಟ್ಟೆ ಕೇವಲ ಒಂದೇ ಕಡೆ ಕೇಂದ್ರೀಕೃತವಾದರೆ ಜನಸಂದಣಿ ಉಂಟಾ ಗುವ ಹಿನ್ನೆಲೆಯಲ್ಲಿ ಸಾರ್ವಜನಿಕರ ನಿವಾ ಸದ ಸಮೀಪದ ಮಾರುಕಟ್ಟೆಗಳನ್ನು ವಿಂಗಡಿಸುವ ಸಂಬಂಧ ಅಧ್ಯಯನ ಮಾಡುತ್ತಿದ್ದೇವೆ. ಸರ್ಕಾರ ಮಾರ್ಗಸೂಚಿ ಹೊರಡಿಸಿ, ಪಾಲಿಕೆ ಜಾರಿ ಮಾಡಬ ಹುದು. ಆದರೆ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಯಮ ಗಳನ್ನು ಪಾಲಿಸಬೇಕು. ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ ಈವರೆಗೆ ನಗರ ಪಾಲಿಕೆ ವತಿಯಿಂದ ಸುಮಾರು ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ್, ದೇವರಾಜ ಠಾಣೆ ಇನ್ಸ್‍ಪೆಕ್ಟರ್ ದಿವಾಕರ್, ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.