ಮೊದಲ ಹಂತದಲ್ಲಿ 11,133  ಪೌರಕಾರ್ಮಿಕರ ಖಾಯಂ
ಮೈಸೂರು

ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರ ಖಾಯಂ

March 14, 2023

ಮೈಸೂರು,ಮಾ.13(ಪಿಎಂ)- ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಯಡಿ ಕೆಲಸ ಮಾಡುತ್ತಿರುವ 11,133 ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅಲ್ಲದೆ, ಎರಡನೇ ಹಂತ ದಲ್ಲಿ 12,867 ಪೌರಕಾರ್ಮಿಕರನ್ನು ಖಾಯಂ ಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಕೋಟೆ ಎಂ.ಶಿವಣ್ಣ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪೌರಕಾರ್ಮಿಕರ ಕುಂದು ಕೊರತೆ ಸಂಬಂಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಬಳಿಕ ಇಲ್ಲಿನ ಕೋರ್ಟ್ ಹಾಲ್‍ನಲ್ಲಿ ಹಮ್ಮಿ ಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಮುಖ್ಯ ಮಂತ್ರಿಗಳು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲನೇ ಹಂತ ದಲ್ಲಿ ನೇರ ಪಾವತಿಯಡಿ ಕೆಲಸ ಮಾಡು ತ್ತಿರುವ 11,133 ಮಂದಿ ಪೌರಕಾರ್ಮಿಕ ರನ್ನು ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಜೊತೆಗೆ ಎರಡನೇ ಹಂತ ದಲ್ಲಿ 12,867 ನೇರ ಪಾವತಿ ಪೌರಕಾರ್ಮಿ ಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಇದಕ್ಕೆ ಆರ್ಥಿಕ ಇಲಾಖೆ ಸಮ್ಮತಿಸಿದ್ದು, ಶೀಘ್ರದಲ್ಲಿ ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಮಾಹಿತಿ ನೀಡಿದರು.

ಹೊರಗುತ್ತಿಗೆ ತೆಗೆದು ನೇರಪಾವತಿ ವ್ಯವಸ್ಥೆ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಾಲಕರು, ಲೋಡರ್ಸ್, ಕ್ಲಿನರ್ಸ್ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದು, ಈ ಸಂಬಂಧ ಹೊರಗುತ್ತಿಗೆ ರದ್ದುಗೊಳಿಸಿ, ನೇರ ಪಾವತಿ ವ್ಯವಸ್ಥೆ ತರಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಳೆದ ಜುಲೈನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ನಾನು ಇದ್ದು, ಈಗಾಗಲೇ ಸರ್ಕಾರಕ್ಕೆ ಪೌರಕಾರ್ಮಿಕರ ಶ್ರೇಯೋ ಭಿವೃದ್ಧಿಗೆ ಸಂಬಂಧ ಮೂರು ಶಿಫಾರಸ್ಸು ಮಾಡಿದ್ದೇನೆ ಎಂದು ತಿಳಿಸಿದರು. ಸಾಮಾನ್ಯವಾಗಿ 45ರಿಂದ 50 ವರ್ಷ ಮಾತ್ರ ಪೌರಕಾರ್ಮಿಕರು ಆಯಸ್ಸು ಇರುವುದನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪೌರಕಾರ್ಮಿಕರ ಆರೋಗ್ಯ ಮುಖ್ಯ ಎಂಬುದನ್ನು ಮನಗಂಡು ಮಾಸ್ಟರ್ ಹೆಲ್ತ್ ಚೆಕ್‍ಅಪ್ ಮಾಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸ್ವಚ್ಛತಾ ಕಾರ್ಮಿಕರ ಸರ್ವೇ: ಇಡೀ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸಂಖ್ಯೆ ನಿಖರವಾಗಿ ದೊರೆಯಲಿದೆ. ಆದರೆ ರೈಲ್ವೆ, ಬಸ್ ನಿಲ್ದಾಣ, ಆಸ್ಪತ್ರೆ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸ್ವಚ್ಛತಾ ಕಾರ್ಮಿಕರ ಸಂಖ್ಯೆಯ ನಿಖರ ಮಾಹಿತಿ ಇಲ್ಲ. ಹಾಗಾಗಿ ಈ ಸಂಬಂಧ ಸರ್ವೇ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ಆರಂಭವಾಗಲಿದ್ದು, ಸರ್ವೇ ವೇಳೆ ಸ್ವಚ್ಛತಾ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಏಕರೂಪದ ಸಮವಸ್ತ್ರ: ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಿಗೆ ಏಕರೂಪದ ಸಮವಸ್ತ್ರ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ 770 ಮಂದಿ ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಇದ್ದಾರೆಂದು ಗುರುತಿಸಲಾಗಿದೆ. ಇವರಿಗೆ ಪುನರ್ವಸತಿ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಅವರಿಗೆ ಉದ್ಯೋಗ ಮತ್ತು ವಸತಿ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಶಿವಣ್ಣ ತಿಳಿಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Translate »