ಈಗ ನಾನು ನಂಜನಗೂಡು  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಲ್ಲ
ಮೈಸೂರು

ಈಗ ನಾನು ನಂಜನಗೂಡು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಲ್ಲ

March 16, 2023

ಮೈಸೂರು, ಮಾ.15-ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ, ಈಗ ಹಿಂದೆ ಸರಿದು, ದಿವಂಗತ ಆರ್.ಧ್ರುವ ನಾರಾಯಣ್ ಅವರ ಪುತ್ರ ದರ್ಶನ್‍ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿ ಸಿದ್ದಾರೆ. ಬುಧವಾರ ಸಂಜೆ ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ಧ್ರುವ ನಾರಾಯಣ್ ಅವರ ನಿವಾಸಕ್ಕೆ ತಮ್ಮ ಪುತ್ರ ಸುನೀಲ್ ಬೋಸ್ ಅವರೊಂದಿಗೆ ಭೇಟಿ ನೀಡಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದರು. ಧ್ರುವನಾರಾಯಣ್ ಓರ್ವ ಕ್ರಿಯಾ ಶೀಲ ನಾಯಕ. ಆತ ತೀರಿಹೋದನಲ್ಲಾ, ನಮ್ಮಿಂದ ದೂರವಾದನಲ್ಲಾ ಎಂಬ ನೋವು ನನಗಿದೆ. ಅವರ ಮಗ ದರ್ಶನ್ ಕೂಡ ನನ್ನ ಮಗ ಸುನೀಲ್‍ನಂತೆಯೇ ಓರ್ವ ಮಗನಾಗಿ ದ್ದಾನೆ. ಅವನು ಬೆಳೆಯಲಿ ಎಂದು ಧ್ರುವ ನಿಧನರಾದ ದಿನದಂದೇ ನಿರ್ಧಾರ ಮಾಡಿದ್ದೆ. ಇಂದು ದರ್ಶನ್ ಮತ್ತು ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹಾಗೂ ಧೈರ್ಯ ಹೇಳಿದ್ದೇನೆ ಎಂದರು. ನಾನು ದರ್ಶನ್ ಅವರನ್ನು ನೋಡಿಯೇ ಇರಲಿಲ್ಲ. ಅವರ ಮನೆಯೂ ನನಗೆ ಗೊತ್ತಿರಲಿಲ್ಲ. ಧ್ರುವನಾರಾಯಣ್ ತೀರಿಹೋದ ದಿನವೇ ನಾನು ದರ್ಶನ್‍ನನ್ನು ನೋಡಿದ್ದು. ಧೃವ ಅವರನ್ನು ಕಳೆದುಕೊಂಡದ್ದು ಮನಸ್ಸಿಗೆ ಬಹಳಷ್ಟು ನೋವಾಗಿದೆ. ಜೀವಕ್ಕಿಂತ ಅಧಿಕಾರ ಮುಖ್ಯವಲ್ಲ. ದರ್ಶನ್ ನಂಜನಗೂಡು ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾಗಿ ಅವರ ತಂದೆಯ ಆಸೆಗಳನ್ನು ಈಡೇರಿಸಲಿ, ಕುಟುಂಬವನ್ನು ನಿರ್ವಹಿಸಲಿ ಎಂದು ಆಶಿಸುತ್ತಿದ್ದೇನೆ ಎಂದು ಮಹ ದೇವಪ್ಪ ಹೇಳಿದರು. ನಾನು ಯಾವಾಗಲೂ ಅಧಿಕಾರದ ಹಿಂದೆ ಹೋದವನಲ್ಲ. ಯಾರ ಹಂಗಿನಲ್ಲೂ ಇರುವವನಲ್ಲ. ನಾನು ಅನುಭವಿಸಿದ ನೋವು, ಹಿಂಸೆ ಹೇಳಲಾ ಗುವುದಿಲ್ಲ. ಸಮಯ ಬಂದಾಗ ಅದನ್ನು ತಿಳಿಸುತ್ತೇನೆ ಎಂದ ಅವರು, ನಂಜನಗೂಡು ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಯಿಂದ ಹಿಂದೆ ಸರಿದು ದರ್ಶನ್‍ಗೆ ಬೆಂಬಲ ಸೂಚಿಸುವ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಈ ಕುರಿತು ನನ್ನ ಮಗನಿಗೂ ಗೊತ್ತಿಲ್ಲ. ಈಗ ತಾನೇ ನಿಮ್ಮನ್ನು (ಮಾಧ್ಯಮದವರು) ಕರೆದು ಹೇಳುತ್ತಿದ್ದೇನೆ ಎಂದರು.

ದರ್ಶನ್ ಅವರಿಗೆ ರಾಜಕಾರಣಕ್ಕೆ ಬರಲು ಇಷ್ಟವಿದೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಮಧ್ಯ ಪ್ರವೇಶಿಸಿದ ಮಹದೇವಪ್ಪ, ಅದನ್ನೆಲ್ಲಾ ಈಗ ಕೇಳುವುದು ಬೇಡ. ಜನರು ಮತ್ತು ಅಭಿಮಾನಿಗಳು ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. ನನ್ನ ಮನಸ್ಸಿಗೂ ಕೂಡ ನಂಜನಗೂಡಿನಲ್ಲಿ ದರ್ಶನ್ ಸ್ಪರ್ಧಿಸುವುದು ಸೂಕ್ತ ಅನ್ನಿಸಿತು. ಧ್ರುವ ನಿಧನರಾದ ದಿನವೇ ಮಾನಸಿಕವಾಗಿ ನಾನು ದರ್ಶನ್ ಸ್ಪರ್ಧೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆ. ಆದರೆ ಅದನ್ನು ಹೇಳಲು ಅದು ಸಮಯವಲ್ಲ. ಹೀಗಾಗಿ ಈಗ ಹೇಳುತ್ತಿದ್ದೇನೆ ಎಂದು ಮಹದೇವಪ್ಪ ಉತ್ತರಿಸಿದರು.

Translate »