ಟೋಲ್‍ನಿಂದ ಪಾರಾಗಲು ಸರ್ವಿಸ್ ರಸ್ತೆಗಿಳಿಯುತ್ತಿರುವ ವಾಹನಗಳು!
ಮೈಸೂರು

ಟೋಲ್‍ನಿಂದ ಪಾರಾಗಲು ಸರ್ವಿಸ್ ರಸ್ತೆಗಿಳಿಯುತ್ತಿರುವ ವಾಹನಗಳು!

March 16, 2023

ಮೈಸೂರು, ಮಾ.15(ಆರ್‍ಕೆ)-ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ವೇ ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಒಂದೆಡೆ ಪ್ರತಿಭಟನೆ ಎದುರಿ ಸುತ್ತಿದ್ದ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದೀಗ ಮತ್ತೊಂದು ಹೊಸ ತಲೆನೋವು ಆರಂಭವಾಗಿದೆ.

ಬೆಂಗಳೂರು-ನಿಡಘಟ್ಟ ನಡುವೆ ಕಣಿಮಿಣಿಕೆ ಬಳಿ ಸ್ಥಾಪಿಸಿರುವ ಟೋಲ್ ಪ್ಲಾಜಾದಲ್ಲಿ ಟೋಲ್ ಪಾವತಿಯಿಂದ ಪಾರಾ ಗಲು ವಾಹನ ಸವಾರರು, ಅದಕ್ಕಿಂತ ಮುಂಚಿತವಾಗಿ ಕ್ರೈಸ್ಟ್ ಯೂನಿವರ್ಸಿಟಿ ಬಳಿ ಎಡಬದಿ ಇರುವ ಬ್ಯಾರಿಕೇಡ್ ತೆರವುಗೊಳಿಸಿ ಸರ್ವೀಸ್ ರಸ್ತೆಯಲ್ಲಿ ಮೈಸೂರು ಕಡೆ ಬರುತ್ತಿದ್ದಾರೆ. ನಿನ್ನೆ (ಮಾ.14)ಯಿಂದ ಈ ಪ್ಲಾಜಾದಲ್ಲಿ ಟೋಲ್ ವಸೂಲಿ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಇಂದು ಮುಂಜಾನೆ ಅಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ಬ್ಯಾರಿಕೇಡ್ ಅನ್ನು ತೆರವುಗೊಳಿಸಿದ್ದು, ಬೆಂಗಳೂರಿನಿಂದ ಬರುವ ಬಹುತೇಕ ವಾಹನಗಳು ಫ್ಲೈ ಓವರ್‍ನಿಂದ ಸರ್ವೀಸ್ ರೋಡ್ ಪ್ರವೇಶಿಸಿ ಮೈಸೂರು ಕಡೆಗೆ ಬರು ತ್ತಿವೆ ಎಂದು ಎನ್‍ಹೆಚ್‍ಎಐ ಅಧಿಕಾರಿ ಗಳು ತಿಳಿಸಿದ್ದಾರೆ. ಅತೀ ವೇಗವಾಗಿ ಬರುವ ಕಾರುಗಳು ಮಾತ್ರ ತಕ್ಷಣ ಸರ್ವೀಸ್ ರಸ್ತೆಗೆ ತಿರುಗಲಾರದೇ ಮೇನ್ ಕಾರಿಡಾರ್‍ನಲ್ಲೇ ಸಾಗಿ ಟೋಲ್ ಪ್ಲಾಜಾ ಮೂಲಕ ಶುಲ್ಕ ಪಾವತಿಸಿ ಮುಂದೆ ಸಾಗುತ್ತಿವೆಯೇ ಹೊರತು, ಉಳಿದ ಬಹುತೇಕ ವಾಹನಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಸಂಚರಿ ಸುತ್ತಿರುವುದರಿಂದ ಕಣಿಮಿಣಿಕೆ ಬಳಿಯ ಪ್ಲಾಜಾದಲ್ಲಿ ಟೋಲ್ ಸಂಗ್ರಹಕ್ಕೆ ಕತ್ತರಿ ಬಿದ್ದಂತಾಗಿದೆ. ಕ್ರೈಸ್ತ ವಿಶ್ವವಿದ್ಯಾನಿಲಯದ ಬಳಿ ಜಮೀನಿನ ಮಾಲೀಕರು ನ್ಯಾಯಾ ಲಯದಲ್ಲಿ ದಾವೆ ಹೂಡಿದ್ದ ಪ್ರಕರಣ ಬಾಕಿ ಇದ್ದ ಕಾರಣ ಆ ಭಾಗದಲ್ಲಿ ಸುಮಾರು 50 ಮೀಟರ್ ಉದ್ದದವರೆಗೆ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಅದಕ್ಕಾಗಿಯೇ ಖಾಯಂ ಬ್ಯಾರಿಕೇಡ್ ಹಾಕಿ ಸರ್ವೀಸ್ ರಸ್ತೆಗೆ ಪ್ರವೇಶವಿಲ್ಲದಂತೆ ತಡೆ ಮಾಡದೇ ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಲಾಗಿದೆ.

ಅದನ್ನು ದುರುಪಯೋಗಪಡಿಸಿಕೊಂಡಿರುವ ಕೆಲವು ವಾಹನ ಚಾಲಕರು ಬ್ಯಾರಿಕೇಡ್ ತೆರವುಗೊಳಿಸಿ ದಾರಿ ಮಾಡಿಕೊಂಡು ಸರ್ವೀಸ್ ರಸ್ತೆಗಿಳಿದು ಸಂಚರಿಸುತ್ತಿದ್ದಾರೆ. ಅದರಿಂದ ಟೋಲ್ ಪ್ಲಾಜಾದಲ್ಲಿ ನಿರೀಕ್ಷಿತ ಶುಲ್ಕ ವಸೂಲಾಗದೆ ನಷ್ಟವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಗ ಬದಲಿಸಿ ವಾಹನಗಳು ಸಂಚರಿಸುತ್ತಿರುವುದರಿಂದ ಟೋಲ್ ಪ್ಲಾಜಾದಲ್ಲಿ ಒಂದು ದಿನಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ಒಳ್ಳೆಯ ರಸ್ತೆ ಮಾಡಿಕೊಟ್ಟರೆ ಜನರು ಟೋಲ್ ಶುಲ್ಕ ಪಾವತಿಸದೇ ಇದ್ದರೆ ರಸ್ತೆ ನಿರ್ವಹಣೆ ಮಾಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ನ್ಯಾಯಾಲಯದಲ್ಲಿ ಒಂದೆರಡು ದಿನದೊಳಗೆ ಭೂ ವಿವಾದ ಪ್ರಕರಣ ಇತ್ಯರ್ಥವಾಗುವ ನಿರೀಕ್ಷೆ ಇದೆ. ತೀರ್ಪು ಬರುತ್ತಿದ್ದಂತೆಯೇ ತಡ ಮಾಡದೆ ಬಾಕಿ ಉಳಿದಿರುವ ಆ ಭಾಗದ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇವೆ. ತದನಂತರ ವಾಹನಗಳು ಮೇನ್ ಕಾರಿಡಾರ್‍ನಲ್ಲೇ ಚಲಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »