ಇಂದಿನಿಂದ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇನಲ್ಲಿ ಟೋಲ್ ಸಂಗ್ರಹ
News

ಇಂದಿನಿಂದ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇನಲ್ಲಿ ಟೋಲ್ ಸಂಗ್ರಹ

March 14, 2023

ರಾಮನಗರ, ಮಾ. 13- ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆಯಿಂದ (ಮಾ. 14ರ ಬೆಳಗ್ಗೆ 8 ಗಂಟೆಯಿಂದ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟದವರೆಗೆ ಟೋಲ್‍ಸಂಗ್ರಹ ಮಾಡುತ್ತಿದೆ.

ಈ ಭಾಗದಲ್ಲಿನ ಎಲ್ಲ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣ ಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೋಲ್‍ಸಂಗ್ರಹವನ್ನು ಆರಂಭಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ನಿನ್ನೆ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಬಳಿ ಮೈಸೂರು ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಿದ್ದರು. ಈಗ ಟೋಲ್‍ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಹಿಂದೆ ಪ್ರಕಟಣೆ ಹೊರಡಿಸಿ ದಂತೆ ಟೋಲ್ ಸಂಗ್ರಹ ದರವನ್ನು
ಮುಂದುವರೆಸಲಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ನಿಡಘಟ್ಟದವರೆಗೆ ಟೋಲ್‍ಸಂಗ್ರಹ: ಕಳೆದ ಮಾರ್ಚ್ 1 ರಂದು ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆದರೆ, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಸಾಕಷ್ಟು ವಿರೋಧ ಉಂಟಾಗಿದ್ದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹಕ್ಕೆ ಬ್ರೇಕ್ ಹಾಕಲಾಗಿತ್ತು. ಈಗ ಮಾರ್ಚ್ 14ರಿಂದ ಟೋಲ್ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ನೀಡಿದ್ದಾರೆ. ಬೆಂಗಳೂರಿನಿಂದ-ನಿಡಘಟ್ಟದವರೆಗೂ ಒಟ್ಟು 56 ಕಿಮೀ ರಸ್ತೆಗೆ ನಾಳೆಯಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸಾರ್ವಜನಿಕರ ವಿರೋಧದ ನಡುವೆಯೂ ನಾಳೆ ಟೋಲ್ ಸಂಗ್ರಹ ಮಾಡಲು ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ. ರಸ್ತೆಗಳ ಬದಿಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ, ಸರ್ವಿಸ್ ರಸ್ತೆ ಸರಿಪಡಿಸಿ ಟೋಲ್ ಸಂಗ್ರಹ ಮಾಡುವಂತೆ ಕಾಂಗ್ರೆಸ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ, ಈ ಎಲ್ಲ ಗೊಂದಲಗಳ ನಡುವೆಯೂ ನಾಳೆ ಬೆಳಿಗ್ಗೆ 8 ಘಂಟೆಯಿಂದ ಟೋಲ್ ಸಂಗ್ರಹ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

Translate »