ಮಾಜಿ ರಾಯಭಾರಿ ಎ.ಮಾಧವನ್ ನಿಧನ
ಮೈಸೂರು

ಮಾಜಿ ರಾಯಭಾರಿ ಎ.ಮಾಧವನ್ ನಿಧನ

March 14, 2023

ಮೈಸೂರು,ಮಾ.13(ಪಿಎಂ)- ಹಿಂದಿನ ಯುಎಸ್‍ಎಸ್‍ಆರ್‍ನ ಮಾಸ್ಕೋ, ಜಪಾನ್ ಮತ್ತು ಜರ್ಮನಿಯಲ್ಲಿ ಭಾರತದ ರಾಯಭಾರಿಯಾಗಿದ್ದು, ಈಗ ಮೈಸೂ ರಿನಲ್ಲಿ ನೆಲೆಸಿದ್ದ ಎ.ಮಾಧವನ್ (89) ಅವರು ವಯೋಸಹಜ ಅನಾರೋಗ್ಯ ದಿಂದ ಭಾನುವಾರ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಲೇಖಕರೂ ಆದ ಪತ್ನಿ ಶ್ರೀಮತಿ ಗಿರಿಜಾ ಮಾಧವನ್, ಅಮೆರಿಕ ದಲ್ಲಿ ನೆಲೆಸಿರುವ ಪುತ್ರ ಸೇರಿದಂತೆ ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ತಮಿಳುನಾಡು ಮೂಲದವರಾದ ಎ. ಮಾಧವನ್, ಎಂ.ಅನಂತನಾರಾಯಣನ್ ಮತ್ತು ಅಖೀಲಾಂಡೇಶ್ವರಿ ಪುತ್ರರಾಗಿ 1933ರ ಅ.9ರಂದು ಜನಿಸಿದರು. ಇವರ ತಂದೆ ಎಂ.ಅನಂತನಾರಾಯಣನ್ ನ್ಯಾಯಮೂರ್ತಿಗಳಾಗಿದ್ದರು. ತಮಿಳು ನಾಡಿನ ತಂಜಾವೂರಿನಲ್ಲಿ ಕೆಎಸ್ ಹೈಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಪಡೆದ ಎ.ಮಾಧ ವನ್, ಬಳಿಕ ಅಂದಿನ ಮದ್ರಾಸ್‍ನ ಲೊಯೊಲಾ ಕಾಲೇಜಿನಲ್ಲಿ ಬಿಎ ಆನರ್ಸ್ ಶಿಕ್ಷಣ ಪೂರೈಸಿದರು. ಎಂಎ ಪದವೀಧರ ರಾದ ಇವರು, ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಅಧೀನದ ಟ್ರಿನಿಟಿ ಕಾಲೇಜಿನಲ್ಲಿ ಒಂದು ವರ್ಷ ಉನ್ನತ ವ್ಯಾಸಂಗ ಮಾಡಿದ್ದರು. ಅಲ್ಲದೆ, ಪೀಕಿಂಗ್, ಲಂಡನ್, ಹಾಂಗ್‍ಕಾಂಗ್ ಸೇರಿದಂತೆ ವಿವಿಧ ದೇಶಗಳಲ್ಲಿ ನಾನಾ ಉನ್ನತ ಹುದ್ದೆ ಅಲಂಕರಿಸಿದ್ದರು. ಜೊತೆಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಫೆಲೋ ಆಗಿದ್ದರು.

ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1956ರಲ್ಲಿ ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಸೇವೆಗೆ ಸೇರಿದರು. ಫ್ರೇಂಚ್, ಜರ್ಮನ್ ಸೇರಿದಂತೆ ಹಲವು ವಿದೇಶಿ ಭಾಷೆಗಳ ಕಲಿತ್ತಿದ್ದ ಇವರು, 1991ರಲ್ಲಿ ಸೇವೆಯಿಂದ ನಿವೃತ್ತರಾದರು. ನಂತರ ದೆಹಲಿಯ ಇಂಡಿಯಾ ಇಂಟರ್‍ನ್ಯಾಷನಲ್ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಮೂರು ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಬಳಿಕ ಮೈಸೂರಿನಲ್ಲಿ ನೆಲೆಸಿದ್ದರು. ಮಾಧವನ್ ಅವರ ಪತ್ನಿ ಗಿರಿಜಾ ಮಾಧವನ್ ಮೈಸೂರಿನವರಾಗಿದ್ದು, ಮೈಸೂರಿನ ಪರಂಪರೆ ಮತ್ತು ಸಾಂಸ್ಕøತಿಕ ವಾತಾವರಣದ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಎ.ಮಾಧವನ್, ಮೈಸೂರಿನ ಯಾದವಗಿರಿಯಲ್ಲಿ ನೆಲೆಸಿದ್ದರು. ಓರ್ವ ಶಿಕ್ಷಕರ ಮೂಲಕ ಕನ್ನಡವನ್ನು ಸಹ ಕಲಿತಿದ್ದರು. ಅಮೆರಿಕದಲ್ಲಿರುವ ಪುತ್ರ ಅನಂತ್ ಎನ್.ಮಾಧವನ್, ಸೊಸೆ ಮತ್ತು ಮೊಮ್ಮಕ್ಕಳ ಆಗಮನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಬಹುಶಃ ಮಾ.15ರಂದು ಅಂತ್ಯಕ್ರಿಯೆ ನಡೆಯಬಹುದು ಎಂದು ಮೃತರ ಪತ್ನಿ ಗಿರಿಜಾ ಮಾಧವನ್ ತಿಳಿಸಿದ್ದಾರೆ.

Translate »