ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ
ಮೈಸೂರು

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ

March 14, 2023

ಮೈಸೂರು, ಮಾ.13(ಆರ್‍ಕೆ)-ಮೇಯರ್ ಹಾಗೂ ಬಿಜೆಪಿ ಸದಸ್ಯರು ಗೈರು ಹಾಜ ರಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಲ್ಪಟ್ಟಿತು.

ಪಾಲಿಕೆಯ ನವೀಕೃತ ಸಭಾಂಗಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಯೋಜನಾ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಹಣ ಕಾಸು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಪಡಿಸಿ ಮೇಯರ್ ಶಿವಕುಮಾರ್ ಸೂಚನೆ ಮೇರೆಗೆ ಪಾಲಿಕೆ ಕೌನ್ಸಿಲ್ ಕಾರ್ಯ ದರ್ಶಿ ರಂಗಸ್ವಾಮಿ ಅವರು ಅಧಿಸೂಚನೆ ಹೊರಡಿಸಿದ್ದರು. ಮೇಯರ್ ಅಧ್ಯಕ್ಷತೆಯ ಸಭೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿ ದ್ದರು. ಆದರೆ ಮೇಯರ್ ಶಿವಕುಮಾರ್ ಹಾಗೂ ಬಿಜೆಪಿ ಸದಸ್ಯರು ಸಭೆಗೆ ಬರಲೇ ಇಲ್ಲ. ಅಲ್ಲಿಯವರೆಗೂ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀ ಕಾಂತರೆಡ್ಡಿ ಹಾಗೂ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಕಾದು ಕುಳಿ ತಿದ್ದರಾದರೂ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆ ನಂತರ ಸ್ಥಳದಿಂದ ತೆರಳಿದರು.

ಮೇಯರ್ ಹಾಗೂ ಬಿಜೆಪಿ ಸದಸ್ಯರು ಬರಬಹುದು. ಚುನಾವಣೆ ಮಧ್ಯಾಹ್ನವಾ ದರೂ ನಡೆಯಬಹುದೆಂದು ನಿರೀಕ್ಷಿಸಿದ್ದ ಕಾಂಗ್ರೆಸ್‍ನ ಅಯೂಬ್ ಖಾನ್, ಜೆಡಿಎಸ್‍ನ ಅಶ್ವಿನಿ ಅನಂತು ಸೇರಿದಂತೆ ಪಾಲಿಕೆ ಸದಸ್ಯರು ಮೇಯರ್ ಶಿವಕುಮಾರ್ ಹಾಗೂ ಬಿಜೆಪಿ ಸದಸ್ಯರ ವರ್ತನೆಗೆ ಬೇಸತ್ತು ಆಕ್ರೋಶ ವ್ಯಕ್ತಪಡಿಸಿ ಮಧ್ಯಾಹ್ನ 1.30 ಗಂಟೆಗೆ ಸ್ಥಳ ದಿಂದ ನಿರ್ಗಮಿಸಿದರು.

ತಮ್ಮನ್ನು ಹಾಗೂ ಅಧಿಕಾರಿಗಳನ್ನು ಅರ್ಧ ದಿನ ಕಾಯಿಸಿದ ಮೇಯರ್, ತಾವೇ ನಿಗದಿಗೊಳಿಸಿದ್ದ ಸಭೆಗೆ ಹಾಜರಾಗದೇ ದುರ್ವರ್ತನೆ ಪ್ರದರ್ಶಿಸಿದ್ದಾರೆ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದ ಮಾಜಿ ಮೇಯರ್ ಅಯೂಬ್ ಖಾನ್, ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಆರೋಪಿಸಿದರು. ಮೇಯರ್ ಚುನಾವಣೆಯಾಗಿ 7 ತಿಂಗಳು ಕಳೆದರೂ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸದೇ ಇರುವುದು ಪ್ರಜಾಪ್ರಭುತ್ವದಲ್ಲಿ ಅಪರಾಧ. ಅಧಿಕಾರ ವಿಕೇಂದ್ರೀಕರಣಗೊಳಿಸಲೆಂದೇ ಸಂವಿಧಾನದತ್ತವಾಗಿ ರಚಿಸಿರುವ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡದೇ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಮೇಯರ್ ವಿರುದ್ಧ ಹರಿಹಾಯ್ದರು.

ನೂರಾರು ಕೋಟಿ ರೂ. ವೆಚ್ಚದ ರಸ್ತೆ-ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಅದರ ಗುಣಮಟ್ಟ ಪರಿಶೀಲಿಸುವುದು ವಕ್ರ್ಸ್ ಕಮಿಟಿ ಜವಾಬ್ದಾರಿಯಾಗಿದೆ. ಆದರೆ ಸ್ಥಾಯಿ ಸಮಿತಿಗಳೇ ಅಸ್ತಿತ್ವದಲ್ಲಿ ಇಲ್ಲದ ಕಾರಣ ಅಧಿಕಾರಿಗಳೇ ಮೇಲುಸ್ತುವಾರಿ ಮಾಡು ವಂತಾಗಿದೆ. ಅದಕ್ಕೆ ಮೇಯರ್ ಬೇಜವಾಬ್ದಾರಿಯೇ ಕಾರಣ ಎಂದು ಅಯೂಬ್ ಖಾನ್ ದೂರಿದರು. ಸಭೆ ಕರೆದು, ತಾವೇ ನಾಪತ್ತೆಯಾಗಿರುವ ಶಿವಕುಮಾರ್ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅವಮಾನಿಸಿದ್ದಾರೆ. ತಮಗಿಷ್ಟ ಬಂದ ರೀತಿ, ದರ್ಪದಿಂದ ಆಡಳಿತ ನಡೆಸುತಿದ್ದಾರೆ. ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಮಯ ಸಮೀಪಿಸುತ್ತಿರುವುದರಿಂದ ಹಾಗೆಯೇ ಅಧಿಕಾರದಲ್ಲಿ ಮುಂದುವರಿಯುವ ಹುನ್ನಾರ ಬಿಜೆಪಿಯವರದ್ದು ಎಂದು ಕಿಡಿಕಾರಿದರು.

Translate »