ಮೈಸೂರು, ಸೆ.3(ಎಂಕೆ)- ಮಾತಿಗಷ್ಟೇ ನಾವು ಕೊರೊನಾ ವಾರಿಯರ್ಸ್, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಾಲು ಸಾಲು ಮನವಿ ಸಲ್ಲಿಸಿದರÀೂ, 14 ದಿನಗಳ ಕಾಲ ಸೇವೆ ಮಾಡುತ್ತಲೇ ಮೌನ ಪ್ರತಿಭಟನೆ ನಡೆಸಿದರೂ ಸ್ಪಂದನೆ ಇಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಕಿಂಚಿತ್ತೂ ಕರುಣೆ ತೋರಲಿಲ್ಲ…
ಕೃಷ್ಣರಾಜ, ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆಯಲ್ಲಿ ಶಿಷ್ಯವೇತನ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಟ್ರೈನಿ ಸ್ಟಾಫ್‍ನರ್ಸ್‍ಗಳ ಅಳಲು ಇದು.
ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ(ಎಂಎಂಸಿಆರ್‍ಐ)ಯಿಂದ 11 ವರ್ಷಗಳಿಂದಲೂ ಶಿಷ್ಯವೇತನ ಆಧಾರದ ಮೇಲೆಯೇ ಕೆಲಸ, 10 ಸಾವಿರ ರೂ.ನಲ್ಲೇ ಜೀವನ ನಿರ್ವಹಣೆ ಮಾಡುವಂತಾಗಿದೆ. ದಿನದಲ್ಲಿ 12 ಗಂಟೆ ದುಡಿದರೂ ಅಥವಾ ನಮಗೆ ಕೊರೊನಾ ಬಂದು ಸತ್ತರೂ ಯಾರೂ ಕೇಳುವವರಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಕೆಲವು ಟ್ರೈನಿ ಸ್ಟಾಫ್‍ನರ್ಸ್‍ಗಳು ನೋವು ತೋಡಿಕೊಂಡರು.
ರೋಗಿಗಳಿಗೆ ಸೇವೆ ನೀಡುತ್ತಲೇ ಸತತ 14 ದಿನಗಳು ಕೆ.ಆರ್. ಆಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸುತ್ತಾ ಶಿಷ್ಯವೇತನ ಹೆಚ್ಚಳಕ್ಕೆ, ವಿಮಾ ಸೌಲಭ್ಯಕ್ಕೆ ಆಗ್ರಹಿಸಿದರೂ ನಮ್ಮ ಮನವಿಯನ್ನು ಆಲಿಸುವಷ್ಟು ಕನಿಷ್ಠ ಸೌಜನ್ಯವೂ ಜನಪ್ರತಿನಿಧಿಗಳಿಗೆ ಮತ್ತು ಇಲ್ಲಿನ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ‘ಮೈಸೂರು ಮಿತ್ರ’ನ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ದಾರಿಯಿಲ್ಲ: ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ(ಜಿಎನ್‍ಎಂ) ಕೋರ್ಸ್ ಮುಗಿಸಿ ವರ್ಷಗಳೇ ಕಳೆದಿ ದ್ದರೂ ಒಳ್ಳೆಯ ಕಡೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ಇಲ್ಲಿ ಕೇವಲ 10 ಸಾವಿರ ರೂ. ಶಿಷ್ಯವೇತನಕ್ಕೆ ದುಡಿಯುವ ಸ್ಥಿತಿಯಿದೆ. ಮನೆಯಲ್ಲಿ ನಮ್ಮ ದುಡಿಮೆಯನ್ನೇ ನಂಬಿಕೊಂಡವರಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಬೇರೆ ಕಡೆ ಉದ್ಯೋಗ ಹುಡುಕುವುದಾದರೂ ಹೇಗೆ? ಅದರಲ್ಲೂ ಸೂಕ್ತ ಕೆಲಸ ದೊರಕು ತ್ತದೆ ಎಂಬ ಖಾತರಿಯಿಲ್ಲ. ಬೇರೆ ದಾರಿ ಇಲ್ಲದೇ ಕಡಿಮೆ ಮೊತ್ತಕ್ಕೆ ಇಲ್ಲಿ ದುಡಿಯುತ್ತಿದ್ದೇವೆ. ಅಷ್ಟೇ ಅಲ್ಲ, ಇಲ್ಲಿ ಉದ್ಯೋಗ ಭದ್ರತೆ ಇಲ್ಲ, ಯಾವುದೇ ಸೌಲಭ್ಯವೂ ಇಲ್ಲ. ಇದು ನಮ್ಮನ್ನು ಮತ್ತಷ್ಟು ಚಿಂತೆಗೆ ದೂಡಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಷ್ಯವೇತನ ಹಾಗೂ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸ್ಟಾಫ್‍ನರ್ಸ್‍ಗಳಿಗೆ 30 ಸಾವಿರದಿಂದ 35 ಸಾವಿರ ರೂ.ವರೆಗೂ ವೇತನ ನೀಡಲಾಗುತ್ತಿದೆ. ಆದರೆ ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯಲ್ಲಿ ಮಾತ್ರ ಕಡಿಮೆ ಶಿಷ್ಯವೇತನ ನೀಡಲಾಗುತ್ತಿದೆ. ಇದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.