ಮೈಸೂರು ಜಿಲ್ಲೆಗೆ 16ನೇ ಸ್ಥಾನ
ಮೈಸೂರು

ಮೈಸೂರು ಜಿಲ್ಲೆಗೆ 16ನೇ ಸ್ಥಾನ

May 9, 2023

ಮೈಸೂರು, ಮೇ 8(ಎಂಟಿವೈ)- ಎಸ್‍ಎಸ್ ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ 16ನೇ ಸ್ಥಾನ ಪಡೆದುಕೊಂಡಿದೆ. ಶೇ.89.75ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅನಘ 623 ಅಂಕ ಹಾಗೂ ಮೂವರು ವಿದ್ಯಾರ್ಥಿಗಳು 621 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘ ಎಸ್ ಕಾರ್ನಿಸ್ 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಟಾಪರ್ ಎನಿಸಿದ್ದರೆ, ಯರಗನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಸ್.ಅಜಯ್ 621, ಸದ್ವಿದ್ಯಾ ಶಾಲೆಯ ಎಂ.ಆರ್.ಅರ್ಜುನ್ 621, ಐಡಿಯಲ್ ಜಾವ ರೋಟರಿ ಶಾಲೆಯ ಎನ್.ರಕ್ಷ 621 ಅಂಕ ಪಡೆದು ಗಮನ ಸೆಳೆದಿದ್ದಾರೆ. ಜಿಲ್ಲೆಯ ಫಲಿತಾಂಶ ಕಳೆದ ಬಾರಿಗಿಂತ ಶೇ.1.63 ರಷ್ಟು ಕುಸಿತ ಕಂಡಿದೆ. 2021-22ನೇ ಸಾಲಿನಲ್ಲಿ 91.38 ರಷ್ಟಾಗಿತ್ತು. 2020-21ನೇ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪ್ರಕಟಿಸಲಾಗಿತ್ತು. 2019-20ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.74.45ರಷ್ಟು ಬಂದಿತ್ತು. ರಾಜ್ಯ ಪಟ್ಟಿಯಲ್ಲಿ ಜಿಲ್ಲೆ 16ನೇ ಸ್ಥಾನ ಪಡೆದುಕೊಂಡಿದೆ. ಮಂಡ್ಯ 2, ಹಾಸನ 3, ಚಾಮರಾಜನಗರ 7ನೇ ಸ್ಥಾನ ಗಳಿಸಿದೆ. ಆದರೆ ಮೈಸೂರು ಜಿಲ್ಲೆಯ ಫಲಿ ತಾಂಶ ತೀವ್ರತರವಾಗಿ ಕುಸಿತ ಕಂಡಿದೆ. ಆದರೂ ಜಿಲ್ಲೆಯು ಎ+ ಪಡೆದುಕೊಂಡಿದೆ.

31,615 ವಿದ್ಯಾರ್ಥಿಗಳು ಪಾಸ್: ಪರೀಕ್ಷೆ ಬರೆದ 34, 991 ಹೊಸ ವಿದ್ಯಾರ್ಥಿಗಳಲ್ಲಿ 31,405 ಉತ್ತೀರ್ಣರಾಗಿದ್ದರೆ, 3,586 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಶೇ.89.75ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಅಭ್ಯರ್ಥಿಗಳು ಶೇ.5.12, ಪುನರಾವರ್ತಿತ ಶಾಲಾ ಅಭ್ಯರ್ಥಿ ಗಳು 46.26, ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು 7.19, ಶಾಲಾ ಅಭ್ಯರ್ಥಿಗಳು ಶೇ.19.79ರಷ್ಟಾಗಿದೆ. ಒಟ್ಟು 36,331 ನೋಂದಾಯಿತರಲ್ಲಿ 31,615 ಪಾಸಾಗಿದ್ದರೆ, 4,716 ಅನುತ್ತೀರ್ಣವಾಗಿದ್ದಾರೆ. ಬಾಲಕಿಯರೇ ಮೇಲುಗೈ: ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜ ರಾದ 18,015 ವಿದ್ಯಾರ್ಥಿ ನಿಯರಲ್ಲಿ 16,280 ವಿದ್ಯಾ ರ್ಥಿನಿಯರು (ಶೇ.90.36ರಷ್ಟು) ತೇರ್ಗಡೆಯಾಗಿದ್ದಾರೆ. 18,100 ವಿದ್ಯಾರ್ಥಿಗಳ ಪೈಕಿ 15,375 ಬಾಲಕರು ಪಾಸ್ ಆಗುವ ಮೂಲಕ ಶೇ.84.94ರಷ್ಟು ಫಲಿತಾಂಶ ದಾಖಲಾಗಿದೆ. 2021-22ರಲ್ಲಿ ಬಾಲಕಿಯರ ಫಲಿತಾಂಶ ಶೇ.93. 73ರಷ್ಟಾಗಿದ್ದರೆ, ಬಾಲಕರ ಫಲಿತಾಂಶ ಶೇ.89.02ರಷ್ಟಾಗಿತ್ತು.

ಗ್ರಾಮೀಣ ಮಕ್ಕಳ ಸಾಧನೆ: ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಭಾಗದ 19,382 ವಿದ್ಯಾರ್ಥಿಗಳಲ್ಲಿ 17,695 ವಿದ್ಯಾರ್ಥಿ ಗಳು ಪಾಸ್ ಆಗಿ ಶೇ.91.29ರಷ್ಟು ಫಲಿತಾಂಶ ದಾಖಲಾಗಿದೆ.

ಕನ್ನಡ ಮಾಧ್ಯಮ ಹಿನ್ನಡೆÉ: ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಿದೆ. 15,016 ವಿದ್ಯಾರ್ಥಿಗಳಲ್ಲಿ 14,602 ಮಕ್ಕಳು ಉತ್ತೀರ್ಣವಾಗುವ ಮೂಲಕ ಇಂಗ್ಲಿಷ್ ಮಾಧ್ಯಮ ಫಲಿತಾಂಶ ಶೇ.97ರಷ್ಟಿದೆ. ಅಂತೆಯೇ 19,952 ಪೈಕಿ 16,798 ವಿದ್ಯಾರ್ಥಿ ಗಳು ಉತ್ತೀರ್ಣರಾಗುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶವು ಶೇ.84ರಷ್ಟಾಗಿದೆ. ಉರ್ದು ಮಾಧ್ಯಮದ ಫಲಿತಾಂಶ ಶೇ.23ರಷ್ಟಾಗಿದೆ.ಈ ಮಾಧ್ಯಮದಲ್ಲಿ ಪರೀಕ್ಷೆ ಬರೆದ 21 ಮಕ್ಕಳಲ್ಲಿ 5 ಜನರು ಮಾತ್ರ ತೇರ್ಗಡೆಯಾಗಿದ್ದಾರೆ.

ಜಿಲ್ಲೆಯ ಟಾಪರ್‍ಗಳು: 623 ಅಂಕ ಗಳಿಸಿರುವ ವಿಜಯವಿಠಲ ಶಾಲೆಯ ಅನಘ ಎಸ್ ಕಾರ್ನಿಸ್ ಜಿಲ್ಲೆಗೆ ಮೊದಲಿಗರು. 2ನೇ ರ್ಯಾಂಕ್ ಅನ್ನು ಮೂವರು ಪಡೆದುಕೊಂಡಿದ್ದಾರೆ. ಮೈಸೂರು ತಾಲೂಕಿನ ಯರಗನಹಳ್ಳಿಯ ಸರ್ಕಾರಿ ಶಾಲೆಯ ಎಸ್.ಅಜಯ್, ಸದ್ವಿದ್ಯಾ ಶಾಲೆಯ ಎಂ.ಆರ್. ಅರ್ಜುನ್, ಐಡಿಯಲ್ ಜಾವಾ ರೋಟರಿ ಶಾಲೆಯ ಎನ್.ರಕ್ಷ 621 ಅಂಕ ಪಡೆದುಕೊಳ್ಳುವ ಮೂಲಕ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

128 ಶಾಲೆ ಗಳಿಗೆ ಶೇ.100 ರಷ್ಟು ಫಲಿತಾಂಶ: ಜಿಲ್ಲೆಯಲ್ಲಿ ಈ ಬಾರಿ ಶೂನ್ಯ ಫಲಿ ತಾಂಶ ಪಡೆದ ಒಂದೇ ಒಂದು ಶಾಲೆಯೂ ಇಲ್ಲದಿರುವುದು ವಿಶೇಷ. ಜಿಲ್ಲೆಯಲ್ಲಿ 128 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ. ಅವುಗಳಲ್ಲಿ 39 ಸರ್ಕಾರಿ, 14 ಅನುದಾನಿತ, 75 ಅನುದಾನರಹಿತ ಶಾಲೆಗಳ ಫಲಿತಾಂಶ ಶೇ.100ರಷ್ಟಾಗಿದೆ.

2ಬಿಯ ಫಲಿತಾಂಶ ಕಡಿಮೆ: ಸಾಮಾಜಿಕ ಗುಂಪುಗಳಲ್ಲಿ ಪ್ರವರ್ಗ 2ಬಿಯ ವಿದ್ಯಾರ್ಥಿ ಗಳ ಫಲಿತಾಂಶ ಉಳಿದ ವರ್ಗಗಳಿಗಿಂತ ಕಡಿಮೆ ಇದೆ. ಈ ವರ್ಗದವರು ಶೇ.80.85ರಷ್ಟು ಪಾಸಾಗಿದ್ದಾರೆ. ಶೇ.83. 88ರಷ್ಟು ಎಸ್‍ಸಿ ವಿದ್ಯಾರ್ಥಿಗಳು, ಶೇ.85.48ರಷ್ಟು ಎಸ್‍ಟಿ ವಿದ್ಯಾರ್ಥಿಗಳು, ಶೇ.94.92ರಷ್ಟು ಇತರ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪ್ರಥಮ ಭಾಷೆಯಲ್ಲಿ 625 ಮಕ್ಕಳಿಗೆ ಪೂರ್ಣ ಅಂಕ: ಭಾಷಾವಾರು ವಿಭಾಗದಲ್ಲಿ ಪೂರ್ಣ ಅಂಕ ಪಡೆದ ಪಟ್ಟಿಯಲ್ಲಿ ಪ್ರಥಮ ಭಾಷೆ ಮೊದಲ ಸ್ಥಾನದಲ್ಲಿ ಈ ವಿಷಯದ 625 (125 ಅಂಕಕ್ಕೆ) ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. 100 ಅಂಕದ ದ್ವಿತೀಯ ಭಾಷೆಯಲ್ಲಿ 115, ತೃತೀಯ ಭಾಷೆಯಲ್ಲಿ 282, ಗಣಿತದಲ್ಲಿ 37, ವಿಜ್ಞಾನದಲ್ಲಿ 14, ಸಮಾಜ ವಿಜ್ಞಾನದಲ್ಲಿ 132 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

Translate »