ನಂಜನಗೂಡು, ಮಾ.1- ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಎರಡು ದಿನಗಳಿಂದ ನಡೆದ ಮೈಸುರು ಜಿಲ್ಲೆಯ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಂಭ್ರಮದ ತೆರೆ ಬಿದ್ದಿತ್ತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಾಸಕ್ತರು ಅಕ್ಷರ ಜಾತ್ರೆಗೆ ಭೇಟಿ ನೀಡಿ ಕನ್ನಡದ ಕಂಪನ್ನು ಸವಿದರು.
ಎರಡು ದಿನಗಳ ಕಾಲ ವಿಶೇಷ ಕವಿಗೋಷ್ಠಿ, ವಿಚಾರ ಸಂಕಿರಣ, ನಾಟಕ ಪ್ರದರ್ಶನ, ಮಾತನಾಡುವ ಗೊಂಬೆ ಪ್ರದರ್ಶನ, ಮಾಧ್ಯಮ ವಿಚಾರ ಗೋಷ್ಠಿ, ಸಂಗೀತ ಕಾರ್ಯ ಕ್ರಮ ಸೇರಿದಂತೆ ಜಾನಪದ ಕಲಾ ತಂಡಗಳ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ಸಮ್ಮೇಳನಕ್ಕೆ ಆಗಮಿಸಿದ ಎಲ್ಲಾ ಸಾಹಿತ್ಯಾಸಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆ ಸಮೀಪದಲ್ಲಿ ವಿವಿಧ ಪ್ರಕಾಶನ ಸಂಸ್ಥೆಗಳಿಂದ ಸಾಹಿತ್ಯ, ಕಥೆ, ಕವನ, ಕಾದಂಬರಿ ಸೇರಿದಂತೆ ಸಾವಿರಾರು ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಎರಡು ದಿನಗಳ ಕಾಲವೂ ನಡೆಯಿತು. ಪುಸ್ತಕ ಪ್ರೇಮಿಗಳು ತಮ್ಮ ಅಭಿರುಚಿ ಹಾಗೂ ನೆಚ್ಚಿನ ಲೇಖಕರ ಪುಸ್ತಕಗಳನ್ನು ಖರೀದಿಸುತ್ತಿದದ್ದು ಸಾಮಾನ್ಯವಾಗಿತ್ತು.
ಪ್ರಮುಖರ ಗೈರು: ದಕ್ಷಿಣ ಕಾಶಿಯಲ್ಲಿ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿದ್ದ ಬಹು ತೇಕ ಜನಪ್ರತಿನಿಧಿಗಳು ಹಾಗೂ ಪ್ರಮುಖ ಗಣ್ಯರು ಗೈರಾಗಿದ್ದರು.
ಇದು ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳಲ್ಲಿ ಬೇಸರ ಮೂಡಿಸಿತ್ತು. ಒಟ್ಟಾರೆ ಎರಡು ದಿನಗಳ ಅಕ್ಷರ ಜಾತ್ರೆಯೂ ಕನ್ನಡ ಭಾಷೆಯ ಅಭಿವೃದ್ಧಿ ಸೇರಿದಂತೆ ನಾಡಿನ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು. ಸ್ಥಳೀಯ ಕಲಾವಿದರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ಅಧಿಕಾರಿಗಳನ್ನು ಗೋಗರೆಯುವ ಸ್ಥಿತಿಯಲ್ಲಿ ಸಾಹಿತಿಗಳು: ನಂದೀಶ ಹಂಚೆ
ಅಂತಿಮ ದಿನವಾದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಮುಂದೆ ಗೋಗರೆಯುವಂತಹ ಸ್ಥಿತಿ ನಮ್ಮ ಸಾಹಿತಿಗಳದ್ದಾಗಿದೆ ಎಂದು ವಿಷಾಧಿಸಿದರು.
ಕನ್ನಡದ ಶ್ರೇಷ್ಠ ಸಾಹಿತಿಯೋರ್ವರ ಸಮಗ್ರ ಪುಸ್ತಕದ ಪ್ರಕಟಣೆಗಾಗಿ ಸರ್ಕಾರ 10 ಲಕ್ಷ ರೂ. ಬಿಡುಗಡೆ ಮಾಡಿದರೂ ಅದನ್ನು ಉಪಯೋಗಿಸುವ ಸ್ಥಿತಿಯಲ್ಲಿ ನಮ್ಮ ಅಧಿಕಾರಿ ವರ್ಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಾಗತೀಕರಣ ಹಾಗೂ ಬಂಡವಾಳಶಾಯಿಗಳಿಂದಾಗಿ ಶಿಕ್ಷಣ ಇಂದು ರಾಜಕೀಕರಣವಾಗಿದೆ ಎಂದು ವಿಶ್ಲೇಷಿಸಿದ ಅವರು, ಜಾಗತೀಕರಣದಲ್ಲಿ ಐಕ್ಯವಾಗಿರುವ ನಾವು ಹೊರಬರಲಾರದ ಸ್ಥಿತಿ ತಲುಪಿದ್ದೇವೆ ಎಂದು ವಿಷಾದಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿದ ಮಾಜಿ ಸಂಸದ ಆರ್.ಧ್ರುವನಾರಯಣ್ ಮಾತನಾಡಿ, ನಂಜನಗೂಡು ಧಾರ್ಮಿಕ ಯಾತ್ರಾ ಸ್ಥಳವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮಹನೀಯರ ಕೊಡುಗೆ ನೀಡಿದೆ. ಈ ಕ್ಷೇತ್ರದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿರುವುದು ಶ್ಲಾಘನೀಯ. ನಗರ ವಾಸಿಗಳಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ಸಮ್ಮೇಳನ ಜಾಗೃತಿಯನ್ನುಂಟು ಮಾಡಿದೆ. ನಾಡು-ನುಡಿ ಉಳಿವಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಸಮ್ಮೇಳನ ಸಹಕಾರಿಯಾಗಲಿದೆ. ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದರು.
ಹಿರಿಯ ವಿದ್ವಾಂಸಕರಾದ ಡಾ.ಸಿ.ಪಿ.ಕೃಷ್ಣಕುಮಾರ್ ಮತ್ತು ಸಂಸ್ಕøತಿ ಚಿಂತಕರಾದ ದೇವನೂರು ಶಂಕರ್ರವರು ಅಭಿನಂದನಾ ನುಡಿಯನ್ನಾಡಿದರು. ಈ ವೇಳೆ ಸುಧರ್ಮ ಸಂಸ್ಕøತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ಕುಮಾರ ದಂಪತಿಗಳನ್ನು ಅಭಿನಂದಿಸಲಾಯಿತು.
ಸಮ್ಮೇಳನಾದ್ಯಕ್ಷ ಟಿ.ಎಸ್.ರಾಜಪ್ಪ, ಕಸಾಪ ಜಿಲ್ಲಾದ್ಯಕ್ಷ ವೈ.ಡಿ.ರಾಜಣ್ಣ, ತಾಲೂಕು ಅಧ್ಯಕ್ಷ ಪಿ.ಮಹೇಶ ಅತ್ತೀಖಾನೆ, ಸಮಾಜ ಸೇವಕ ಯು.ಎನ್.ಪದ್ಮನಾಭರಾವ್, ಮುಖಂಡರಾದ ಮಂಡಿಗೆರೆ ಗೋಪಾಲ್, ಚಂದ್ರಶೇಖರ್, ರಾಜಶೇಖರ್ ಕದಂಬ, ಎನ್.ಸಿ.ಬಸವಣ್ಣ, ಡಾ.ತಿಮ್ಮಯ್ಯ, ಲತಾ ಮುದ್ದುಮೋಹನ್, ಸತೀಶ್ ದಳವಾಯಿ, ಹನುಮಂತು, ಸತೀಶ್, ಸುರೇಶ್, ವಾಸು, ಗುರುಸ್ವಾಮಿ, ಖಚಾಂಚಿ ಎಂ.ಎನ್. ಸತೀಶ್, ಪ್ರಭಾಕರ್ ಉಪಸ್ಥಿತರಿದ್ದರು.