ದಸರಾಗೆ 17 ಆನೆ ಅರ್ಹ
ಮೈಸೂರು

ದಸರಾಗೆ 17 ಆನೆ ಅರ್ಹ

August 6, 2022

ಮೈಸೂರು,ಆ.5- ನಾಡಹಬ್ಬ ದಸರಾ ಮಹೋತ್ಸವಲ್ಲಿ ಪಾಲ್ಗೊಳ್ಳಲು ಒಟ್ಟು 17 ಆನೆಗಳು ಅರ್ಹತೆ ಪಡೆದಿವೆ. ಇದಕ್ಕೆ ಸರ್ಕಾರವೂ ಅನುಮೋದಿಸಿದೆ. ಆದರೆ ಜಂಬೂಸವಾರಿಯಲ್ಲಿ 14 ಆನೆಗಳು ಮಾತ್ರ ಪಾಲ್ಗೊಳ್ಳಲಿವೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಅರಮನೆ ಆವರಣ ಕ್ಕಷ್ಟೇ ಸೀಮಿತವಾಗಿದ್ದ ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಉದ್ದೇಶಿಸಿರುವುದರಿಂದ, ಈ ಬಾರಿ 14 ಆನೆಯನ್ನು ಕರೆತರಲು ಉದ್ದೇಶಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಹೊಸ ಆನೆಗೆ ವಹಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಅರಣ್ಯ ಇಲಾಖೆ ಪಿಸಿಸಿಎಫ್ ಕಚೇರಿಗೆ ಪತ್ರ ಬರೆದು 17 ಆನೆಗಳಿಗೆ ಅನುಮತಿ ನೀಡುವಂತೆ ಕೋರಿದ್ದರು. ಈ ಪತ್ರದ ಮೇರೆಗೆ ಆ.3ರಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳು ಅನುಮತಿ ನೀಡಿದ್ದು, ಅದರಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 14 ಆನೆ ಹಾಗೂ 3 ಆನೆ ಸ್ಟ್ಯಾಂಡ್ ಬೈ ಆಗಿ ಅನುಮತಿ ನೀಡಿ, ಆನೆಗಳಿರುವ ಕ್ಯಾಂಪ್‍ಗಳ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

14 ಆನೆಗಳ ಪಟ್ಟಿ ಬಿಡುಗಡೆ: 17 ಆನೆಗಳಿಗೆ ಅನುಮತಿ ದೊರೆತಿದ್ದರೂ, ದಸರಾ ಮಹೋತ್ಸವದಲ್ಲಿ 14 ಆನೆಗಳನ್ನು ಮಾತ್ರ ಕರೆ ತರಲಾಗುತ್ತಿದೆ. ಅಂತಿಮ ಪಟ್ಟಿಯನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೊದಲ ಹಂತದಲ್ಲಿ ಆ.7ರಂದು ಅಂಬಾರಿ ಆನೆ ಅಭಿಮನ್ಯು (57ವರ್ಷ), ಭೀಮ (22), ಮಹೇಂದ್ರ(39), ಅರ್ಜುನ(63), ವಿಕ್ರಮ (59), ಧನಂಜಯ (44), ಕಾವೇರಿ(45), ಚೈತ್ರ(49), ಲಕ್ಷ್ಮೀ(21) ಕರೆತರಲಾಗುತ್ತಿದೆ. ಎರಡನೇ ತಂಡದಲ್ಲಿ ಗೋಪಾಲಸ್ವಾಮಿ (39), ಗೋಪಿ(41), ಶ್ರೀರಾಮ (40), ವಿಜಯ(63), ಪಾರ್ಥಸಾರಥಿ(18) ಮೈಸೂರಿಗೆ ಆಗಮಿಸಲಿವೆ.

ಸ್ಟ್ಯಾಂಡ್ ಬೈ:ಸುಗ್ರೀವ(40), ಕುಂತಿ(36), ಗಣೇಶ(39) ಕಾಯ್ದಿಟ್ಟ ಆನೆಗಳಾಗಿವೆ. ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಡುವ ಆನೆಗಳಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ, ಬದಲಿಯಾಗಿ ಈ ಮೂರು ಆನೆಗಳನ್ನು ಕರೆತರಲು ಇಲಾಖೆ ನಿರ್ಧರಿಸಿದೆ.

ಆ.7ರಂದು ಗಜಪಯಣ: ಈ ಸಾಲಿನ ನಾಡಹಬ್ಬ ದಸರಾ ಮಹೋತ್ಸವದ ಗಜಪಯಣಕ್ಕೆ ಆ.7ರಂದು ಬೆಳಗ್ಗೆ 9.01ರಿಂದ 9.35ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಚಾಲನೆ ದೊರೆಯ ಲಿದೆ. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪೂಜೆ ಸಲ್ಲಿಸಿ, ವೀರನಹೊಸಳ್ಳಿ ಯಲ್ಲಿ ಬೀಳ್ಕೊಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಶಾಸಕ ಹೆಚ್.ಪಿ.ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಅಂದು ಮಧ್ಯಾಹ್ನದೊಳಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಆನೆಗಳು ಆಗಮಿಸಲಿವೆ.

ಗಜಪಯಣಕ್ಕೆ ಮೆರಗು: ಗಜಪಯಣಕ್ಕೆ ಈ ಬಾರಿ ಜಾನಪದ ಮೆರಗು ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಜಪಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ. ಅಲ್ಲದೆ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಬುಡಕಟ್ಟು ಸಾಂಪ್ರದಾಯಿಕ ನೃತ್ಯ, ಟಿಬೆಟಿಯನ್ನರ ನೃತ್ಯ, ಗೊರವರ ಕುಣಿತ, ಜೇನು ಕುರುಬರ ಕುಣಿತ ಸೇರಿದಂತೆ ಸುಮಾರು 15ಕ್ಕೂ ಹೆಚ್ಚಿನ ಕಲಾ ತಂಡಗಳನ್ನು ಆಹ್ವಾನಿಸಿ, ಗಜಪಡೆಯನ್ನು ಮೆರವಣಿಗೆ ಮೂಲಕ ಮೈಸೂರಿಗೆ ಕಳುಹಿಸುವ ಉದ್ದೇಶವನ್ನು ಅರಣ್ಯ ಇಲಾಖೆ ಮಾಡಿಕೊಂಡಿದೆ.

ಸಿದ್ಧತೆ: ವೀರನಹೊಸಳ್ಳಿ ಸಮೀಪ ಆಶ್ರಮ ಶಾಲೆ ಮುಂಭಾಗದ ಮೈದಾನದಲ್ಲಿ ಗಜಪಯಣದ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಕಳೆದ ಎರಡು ದಿನಗಳಿಂದ ಹುಣಸೂರು ಭಾಗದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕೆಸರು ಆವರಿಸಿದ್ದು, ವಾಟರ್ ಪ್ರೂಫ್ ಪೆಂಡಾಲ್ ಹಾಕಿ ಕಾರ್ಯಕ್ರಮಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಡಲು ಆಯ್ಕೆಯಾಗಿರುವ ಶಾಲಾ ಮಕ್ಕಳು ಅಭ್ಯಾಸದಲ್ಲಿ ನಿರತರಾಗಿದ್ದು, ಗಜಪಯಣದ ಕಾರ್ಯಕ್ರಮಕ್ಕೆ ಮೆರಗು ತುಂಬಲು ಸಿದ್ದರಾಗುತ್ತಿದ್ದಾರೆ.

ಆ.10ರಂದು ಅರಮನೆ ಪ್ರವೇಶ: ಆ.10ರಂದು ಬೆಳಗ್ಗೆ 7ಗಂಟೆಗೆ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯಿಂದ ಪೂಜೆ ಸಲ್ಲಿಸುವ ಅರಮನೆಯತ್ತ ಕಳುಹಿಸಿಕೊಡಲಾಗುತ್ತದೆ. ಅಂದು ಬೆಳಗ್ಗೆ 9.20ರಿಂದ 10ಗಂಟೆಯೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಗಜಪಡೆ ಅರಮನೆ ಜಯಮಾರ್ತಾಂಡ ದ್ವಾರ ಪ್ರವೇಶಿಸಲು ಮಹೂರ್ತ ನಿಗಧಿ ಮಾಡಲಾಗಿದೆ. ಅ.5ರಂದು ಜಂಬೂಸವಾರಿ ನೆರವೇರಿದ ನಂತರ ಅ.7ರಂದು ಬೆಳಗ್ಗೆ 6.30ರಿಂದ 6.45ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಆನೆಗಳಿಗೆ ಪೂಜೆ ಮಾಡಿ, ಬೀಳ್ಕೊಡಲಾಗುತ್ತದೆ.

Translate »