ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದ ಶಾಸಕ ಸುರೇಶ್‍ಗೌಡ
ಮಂಡ್ಯ

ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದ ಶಾಸಕ ಸುರೇಶ್‍ಗೌಡ

August 6, 2022

ನಾಗಮಂಗಲ, ಆ.5-ತಮ್ಮ ಇಲಾಖೆಗೆ ಸೇರಿದ ಜಾಗದ ರಕ್ಷಣೆಗಾಗಿ ಪೊಲೀಸರ ಸಹಕಾರದೊಂದಿಗೆ ಟ್ರಂಚ್ ತೋಡುತ್ತಿದ್ದ ಅರಣ್ಯಾಧಿಕಾರಿಗಳ ಮೇಲೆ ನಾಗಮಂಗಲ ಶಾಸಕ ಸುರೇಶ್‍ಗೌಡ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಹಾಕಿದ ಘಟನೆ ತಾಲೂಕಿನ ಮಾಲತಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮಾಲತಿ ಗ್ರಾಮದ ಸರ್ವೆ ನಂ.135 ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾ ಗಿದ್ದು, ಈ ಭೂಮಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆಸಿ ನೆಟ್ಟು ಪೋಷಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕೆಲ ರೈತರು ಅಲ್ಲಿನ ಮರಗಳನ್ನು ಕಡಿದು ರಾತ್ರೋ ರಾತ್ರಿ ಜೆಸಿಬಿಯಿಂದ ಸಮತಟ್ಟು ಮಾಡಿ ತೆಂಗಿನ ಸಸಿ ನೆಟ್ಟಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಇಲಾಖೆಗೆ ಸೇರಿದ ಜಾಗದ ಬಂದೋಬಸ್ತ್‍ಗಾಗಿ ಇಂದು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಟ್ರಂಚ್ ತೋಡುತ್ತಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಶಾಸಕ ಸುರೇಶ್‍ಗೌಡ, ಅರಣ್ಯಾಧಿಕಾರಿಗಳನ್ನು ಮನಸ್ಸೋ ಇಚ್ಛೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಇದೇ ರೀತಿ ಮುಂದುವರೆದರೆ ನಿಮಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಶಾಸಕರು ಅರಣ್ಯಾಧಿಕಾರಿಗಳ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿ ಆರ್ಭಟಿಸಿದ ವಿಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾ ಗಿದೆ. ಜುಲೈ 28ರಂದು ರಾತ್ರಿ ಮರ ಕಡಿಯುತ್ತಿದ್ದವರನ್ನು ಬೆದರಿಸಲು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ವಿಷಯವನ್ನು ಪ್ರಸ್ತಾಪಿಸಿ, ಶಾಸಕರು ಹರಿಹಾಯ್ದಿದ್ದಾರೆ.

ವಿಡಿಯೋದಲ್ಲಿ ಇರುವುದೇನು?: ಅರಣ್ಯಾಧಿಕಾರಿಗಳು ಟ್ರಂಚ್ ತೋಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಸುರೇಶ್‍ಗೌಡ, `ಏಯ್, ಯಾವನೋ ಅವ್ನು, ಶೂಟ್ ಮಾಡೋಕ್ ಬಂದೋನು? ಯಾರ್ ನಿನಗೆ ಶೂಟ್ ಮಾಡಕ್ ಪರ್ಮಿಷನ್ ಕೊಟ್ಟಿದ್ದು? ನಿನಗೆ ಕೆಳಗಿನಿಂದ ಬಿಟ್ಟರೆ ತಲೆಯಿಂದ ಬುಲೆಟ್ ಬರಬೇಕು. ಇದೆಲ್ಲಾ ನಿಮ್ಮಪ್ಪನ ಆಸ್ತಿನಾ? ಜಂಟಿ ಸರ್ವೆ ಮಾಡ್ಸಿ, ಅಲ್ಲಿವರೆಗೂ ಈ ಜಾಗಕ್ಕೆ ಕಾಲಿಡಬೇಡ. ಇಲ್ಲಿ ಕೆಲಸ ಮಾಡ್ತೀಯಾ, ಮಾಡು ನೋಡೋಣ. ಏನ್ ಆಟ ಆಡ್ತಿದ್ದೀಯಾ ನೀನು, ಪೊಲೀಸರನ್ನು ಕರ್ಕೊಂಡ್ ಬಂದ್ ಹೆದರಿಸ್ತೀಯಾ? ನಿನ್ನನ್ನು ಏನನ್ಕೊಂಡಿದ್ದೀಯಾ? ದಾದಾಗಿರಿ ಮಾಡ್ತಿದ್ದೀಯಾ? ಎದೆಗೆ ಒದ್ದುಬಿಡ್ತೀನಿ’ ಎಂದು ದಬಾಯಿಸಿದ್ದಲ್ಲದೇ ಮಧ್ಯೆ ಮಧ್ಯೆ ಅವಾಚ್ಯ ಪದಗಳನ್ನು ಧಾರಾಳವಾಗಿ ಬಳಸಿದರು. `ನಾನು ದಾದಾಗಿರಿ ಮಾಡ್ತಾ ಇಲ್ಲ ಸಾರ್. ನಾವು ಅರಣ್ಯ ಉಳಿಸೋ ಕೆಲಸ ಮಾಡ್ತಾ ಇದ್ದೀವಿ’ ಎಂದು ಆರ್‍ಎಫ್‍ಓ ಸತೀಶ್ ಅವರು ಹೇಳುತ್ತಿದ್ದಂತೆಯೇ ಶಾಸಕರು, `ಏಯ್, ಅದು ನಿನಗಿಂತ ನನಗೆ ಚೆನ್ನಾಗಿ ಗೊತ್ತು. ಎಷ್ಟರ ಮಟ್ಟಿಗೆ ಅರಣ್ಯ ಉಳಿಸ್ತಾ ಇದ್ದೀಯಾ? ಎಷ್ಟು ಲೂಟಿ ಮಾಡ್ತಾ ಇದ್ದೀಯಾ? ಅದೆಲ್ಲಾ ನನಗೆ ಗೊತ್ತು. ಅದೆಷ್ಟ್ ಜನ ಪೊಲೀಸರನ್ನು ಕರ್ಕೊಂಡ್ ಬರ್ತೀಯೋ ಬಾ, ನಾನೂ ನೋಡ್ತೇನೆ. ಜಂಟಿ ಸರ್ವೆ ಮಾಡ್ಸಿ ಅಂತ ಮೂರು ವರ್ಷದಿಂದ ಬಡ್ಕೋತಾ ಇದ್ದೀನಿ, ಇನ್ನೂ ಮಾಡ್ಸಿಲ್ಲ. ಏನ್ ಕತ್ತೆ ಕಾಯ್ತಿದ್ದೀಯಾ’ ಎಂದಾಗ ಆರ್‍ಎಫ್‍ಓ ಸಾರ್, ಮೇಲಧಿಕಾರಿಗಳಿಗೆ ವರದಿ ಕೊಟ್ಟಿದ್ದೀವಿ. ಆರ್‍ಟಿಸಿ ಇಂಡೀಕರಣಕ್ಕೂ ಅರ್ಜಿ ಕೊಟ್ಟಿದ್ದೀವಿ ಎಂದಾಗ ಜಂಟಿ ಸಮೀಕ್ಷೆ ಮಾಡಿದ ಮೇಲೆ ಬಾ ಎಂದು ಶಾಸಕರು ಹೇಳಿದರು.

ಸಾರ್, ಇದನ್ನು ಮೇಲಧಿಕಾರಿಗಳು ಹೇಳ್ಬೇಕು ಎಂದು ಆರ್‍ಎಫ್‍ಓ ಸತೀಶ್ ಪ್ರತಿಕ್ರಿಯಿ ಸಿದಾಗ `ಅದ್ಯಾವನು ಮೇಲಾಧಿಕಾರಿ, ತಗೋ ಅವನ ಫೋನು. ನಾನೇ ಮಾತಾಡು ತ್ತೇನೆ’ ಎಂದು ಹೇಳಿದ ಶಾಸಕರು ಅವರೇ ಎಸಿಎಫ್ ಶಂಕರೇಗೌಡರಿಗೆ ಕರೆ ಮಾಡಿ `ಏಯ್, ಶಂಕರೇಗೌಡ ನಿನಗೆ ಗೌರವಯುತವಾಗಿ ಹೇಳ್ತಾ ಇದ್ದೇನೆ. ಮರ್ಯಾದೆ ಯಿಂದ ಜಂಟಿ ಸಮೀಕ್ಷೆ ಆಗೋವರ್ಗೂ ನಿಮ್ಮವರು ಬಂದರೆ ಸರಿ ಇರಲ್ಲ. ಪ್ರತಿಯೊಂದ್ ಕಡೆಯೂ ನಾನೇ ಬಂದು ನಿಂತ್ಕೋಬೇಕಾಗುತ್ತೆ. ಪ್ರತಿಯೊಂದನ್ನೂ ಜಂಟಿ ಸಮೀಕ್ಷೆ ಮಾಡ್ಸಿ. ಶೂಟ್ ಮಾಡಿದವನಿಗೆ ಮೊದಲು ಸಸ್ಪೆಂಡ್ ಮಾಡ್ಸು. ಏನ್, ತಮಾಷೆ ಮಾಡ್ತಾ ಇದ್ದೀರಾ? ಜನರನ್ನ, ನಮ್ಮನ್ನ ದನ ಅಂದ್ಕೊಡ್ಡಿದ್ದೀರಾ? ಜಂಟಿ ಸಮೀಕ್ಷೆ ಆಗೋವರ್ಗೂ ಯಾರೂ ಕಾಲಿಡಬೇಡಿ’ ಎಂದಾಗ ಅತ್ತಲಿಂದ ಶಂಕರೇಗೌಡರು `ಆಯ್ತಣ್ಣಾ’ ಎಂದು ಪ್ರತಿಕ್ರಿಯಿಸುತ್ತಿದ್ದಂತೆಯೇ ಶಾಸಕರು ಕರೆ ಕಟ್ ಮಾಡಿದರು. ಈ ರಾದ್ಧಾಂತದ ನಂತರ ಅರಣ್ಯಾಧಿಕಾರಿಗಳು ಟ್ರಂಚ್ ತೋಡುವ ಕೆಲಸ ಕೈಬಿಟ್ಟು ಹಿಂತಿರುಗಿದರು.

Translate »