ಅಂತೂ ಮೈಸೂರಿಗೆ ಮರಳಿದ ಅತಂತ್ರ 1700 ಮಂದಿ: ಹೊರ ರಾಜ್ಯದಿಂದ ಬಂದವರು ಕಡ್ಡಾಯ ಕ್ವಾರಂಟೈನ್
ಮೈಸೂರು

ಅಂತೂ ಮೈಸೂರಿಗೆ ಮರಳಿದ ಅತಂತ್ರ 1700 ಮಂದಿ: ಹೊರ ರಾಜ್ಯದಿಂದ ಬಂದವರು ಕಡ್ಡಾಯ ಕ್ವಾರಂಟೈನ್

May 7, 2020

ಮೈಸೂರು, ಮೇ 6(ಎಂಟಿವೈ)- 3ನೇ ಅವಧಿ ಲಾಕ್‍ಡೌನ್ ವೇಳೆ ದೊರೆತ ವಿನಾ ಯಿತಿಯಿಂದಾಗಿ ಹೊರ ರಾಜ್ಯ ಹಾಗೂ ಅಂತರ ಜಿಲ್ಲೆಗಳಿಂದ ಮೈಸೂರಿಗೆ ವಾಪಸ್ಸಾ ಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 3 ದಿನದಿಂದ ಮೈಸೂರಿಗೆ ಮರಳಿದ 1700ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೆ ಒಳಪಡಿ ಸಲಾಗಿದೆ. ಬೇರೆ ರಾಜ್ಯದಿಂದ ಬರುತ್ತಿರು ವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ. ನೌಕರಿ, ವ್ಯಾಪಾರ ಎಂದು ದುಡಿಮೆಗಾಗಿ, ವ್ಯಾಸಂಗಕ್ಕಾಗಿ ಮೈಸೂ ರಿನಿಂದ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಗೆ ವಲಸೆ ಹೋಗಿದ್ದವರು ಲಾಕ್‍ಡೌನ್ ನಿಂದ ಕಷ್ಟಕ್ಕೆ ಸಿಲುಕಿದ್ದು, ಈಗ ಲಾಕ್‍ಡೌನ್ ತುಸು ಸಡಿಲವಾಗಿದ್ದರಿಂದ ಜಿಲ್ಲಾಡಳಿತ ದಿಂದ ಪಾಸ್ ಪಡೆದು ಮೈಸೂರಿಗೆ ವಾಪಸಾ ಗುತ್ತಿದ್ದಾರೆ. ತವರು ಸೇರಲು ತವಕಿಸುತ್ತಿರು ವವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದೆ. ಬೇರೆ ಜಿಲ್ಲೆ ಹಾಗೂ ರಾಜ್ಯ ಗಳಿಂದ ಬರುತ್ತಿರುವವರ ತಪಾಸಣೆಗೆ 5 ಚೆಕ್‍ಪೋಸ್ಟ್, 6 ಸ್ಕ್ರೀನಿಂಗ್ ಸೆಂಟರ್ ನಿರ್ಮಿಸಲಾಗಿದೆ. ಚೆಕ್‍ಪೋಸ್ಟ್‍ನಲ್ಲಿ ಬೇರೆ ಊರಿಂದ ಬರುವವರ ದೇಹಾರೋಗ್ಯದ ಕಡ್ಡಾಯ ತಪಾಸಣೆ ಮಾಡಿ, ವಿವರ ದಾಖ ಲಿಸಿಕೊಳ್ಳಲಾಗುತ್ತಿದೆ. ಹಾಸನ, ಚಿಕ್ಕಮಗ ಳೂರು ಭಾಗದಿಂದ ಬರುವವರು ಕೆ.ಆರ್. ನಗರದ ಭೇರ್ಯದಲ್ಲಿರುವ ಚೆಕ್‍ಪೋಸ್ಟ್ ನಲ್ಲಿ ವೈಯಕ್ತಿಕ ವಿವರ ಪಡೆದು, ಸಮೀಪದ ಸಮುದಾಯ ಭವನದಲ್ಲಿನ ಸ್ಕ್ರೀನಿಂಗ್ ಸೆಂಟರ್ ನಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಮಂಡ್ಯ, ತುಮಕೂರು, ಬೆಂಗಳೂರು, ಕೋಲಾರ, ರಾಮನಗರ ಹಾಗೂ ಅಕ್ಕ ಪಕ್ಕದ ಪ್ರದೇಶಗಳಿಂದ ಬರುವ ವಾಹನ, ಪ್ರಯಾಣಿಕರ ವಿವರಗಳುಳ್ಳ ಡೇಟಾವನ್ನು ಮೈಸೂರು-ಬೆಂಗಳೂರು ರಸ್ತೆಯ ಕಳಸ್ತವಾಡಿ-ಸಿದ್ದಲಿಂಗಪುರ ನಡುವಿನ ಚೆಕ್‍ಪೋಸ್ಟ್‍ನಲ್ಲಿ ಸಂಗ್ರಹಿಸಲಾಗುತ್ತಿದೆ. ಬಳಿಕ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ಆವರಣದಲ್ಲಿ ತೆರೆದಿರುವ ಸ್ಕ್ರೀನಿಂಗ್ ಸೆಂಟರ್‍ನಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಚಾಮರಾಜನಗರ, ತಮಿಳುನಾಡು, ಗುಂಡ್ಲುಪೇಟೆ ಮತ್ತಿತರೆಡೆಯಿಂದ ಬರುವವರು ಟಿ.ನರಸೀಪುರದ ಮೂಗೂರು ಚೆಕ್‍ಪೋಸ್ಟ್‍ನಲ್ಲಿ ಮಾಹಿತಿ ನೀಡಿ, ಸಮೀಪದ ಸಮುದಾಯ ಭವನದಲ್ಲಿ ತೆರೆದಿರುವ ಸ್ಕ್ರೀನಿಂಗ್ ಕೇಂದ್ರದಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೊಳಗಾಗಬೇಕಿದೆ. ಕೊಪ್ಪ ಮತ್ತು ಬೆಟ್ಟದಪುರದಲ್ಲೂ ವಿವಿಧ ಜಿಲ್ಲೆಗಳಿಂದ ಬರುವವರ ವಿವರ ಸಂಗ್ರಹಿಸಿ, ಸಮೀಪದಲ್ಲೇ ತೆರೆದಿರುವ ಸ್ಕ್ರೀನಿಂಗ್ ಸೆಂಟರ್‍ನಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಸ್ಟಿಕ್ಕರ್ ಕಾವಲು: ತಪಾಸಣಾ ಕೇಂದ್ರದಿಂದ ಸ್ಕ್ರೀನಿಂಗ್ ಸೆಂಟರ್ ದೂರವಿದ್ದರೆ ಕಡ್ಡಾಯವಾಗಿ ಸ್ಕ್ರೀನಿಂಗ್ ಸೆಂಟರ್ ಹೋಗಲೇಬೇಕಾದವರ ವಾಹನಕ್ಕೆ ಕೆಂಪು ಬಣ್ಣದಲ್ಲಿ ಕೋವಿಡ್-19 ಎಂಬ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಆ ವಾಹನದವರು ಸ್ಕ್ರೀನಿಂಗ್ ಸೆಂಟರ್‍ಗೆ ಹೋಗಿ ವಾಹನ ಹಾಗೂ ಸ್ಟಿಕ್ಕರ್‍ನ ನಂಬರ್ ನೋಂದಾ ಯಿಸಬೇಕು. ನಂತರವಷ್ಟೇ ಅವರಿಗೆ ತಪಾಸಣೆ ಮಾಡಲಾಗುತ್ತದೆ.

99 ಕಾರ್ಮಿಕರ ಆಗಮನ: ವಿವಿಧ ನಗರಕ್ಕೆ ಕೆಲಸಕ್ಕೆಂದು ಹೋಗಿ ಸಂತ್ರಸ್ತರಾಗಿದ್ದವರು ಈಗ ಊರಿಗೆ ಮರಳುತ್ತಿದ್ದಾರೆ. ಬೆಂಗಳೂರಿಂದ ಸಾರಿಗೆ ಸಂಸ್ಥೆ ಬಸ್‍ನಲ್ಲಿ ಇಂದು 99 ವಲಸೆ ಕಾರ್ಮಿಕರು ಮೈಸೂರಿಗೆ ಮರಳಿದರು. ಬಸ್‍ನಲ್ಲಿ ಬರುವವರಿಗೆ ಸಾತಗಳ್ಳಿ ಬಸ್ ನಿಲ್ದಾಣದ ಸ್ಕ್ರೀನಿಂಗ್ ಸೆಂಟರ್‍ನಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ವೈಯಕ್ತಿಕ ವಿವರ ದಾಖಲಿಸಿಕೊಂಡು ಅವರ ಮನೆಗೆ ಕಳುಹಿಸಲಾಗುತ್ತಿದೆ.

ಪಾಸ್ ಇಲ್ಲದಿದ್ದರೆ ವಾಪಸ್: ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ಪಾಸ್ ಇದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಪಾಸ್ ಇಲ್ಲದ ವಾಹನವನ್ನು ವಾಪಸ್ ಕಳುಹಿಸಲಾಗುತ್ತಿದೆ. ಪಾಸ್‍ನ ನೈಜತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಬೆಂಗಳೂರು ರಸ್ತೆಯಿಂದ ಮೈಸೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಪಾಸಣೆ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಮೈಸೂರು ಮೂಲಕ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗುವವರ ಪಾಸ್ ಮಾತ್ರ ಪರಿಶೀಲಿಸಲಾಗುತ್ತಿದೆ. ಮೈಸೂರಲ್ಲೇ ನೆಲೆಸುವವರಿಗೆ ಮಾತ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನ ಡಿಸಿ ಅಭಿರಾಮ್ ಜಿ.ಶಂಕರ್ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ಆವರಣದ ಸ್ಕ್ರೀನಿಂಗ್ ಸೆಂಟರ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಕಳಸ್ತವಾಡಿ ಚೆಕ್‍ಪೋಸ್ಟ್‍ಗೆ ಎಸಿಪಿ ಎಂ.ಶಿವಶಂಕರ್, ಎನ್.ಆರ್.ಠಾಣೆ ಇನ್ಸ್‍ಪೆಕ್ಟರ್ ಜಿ.ಶೇಖರ್ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಸಿಬ್ಬಂದಿಗೆ ಏನೆಲ್ಲಾ ಮಾಹಿತಿ ಕಲೆ ಹಾಕಬೇಕು ಎಂಬ ಬಗ್ಗೆ ಸೂಚನೆ ನೀಡಿದರು.

Translate »