ಚಾಮರಾಜನಗರದಲ್ಲಿ ಕೋವಿಡ್ ಪರೀಕ್ಷೆಯ ಪಿಸಿಆರ್ ಪ್ರಯೋಗಾಲಯ ಉದ್ಘಾಟನೆ
ಚಾಮರಾಜನಗರ

ಚಾಮರಾಜನಗರದಲ್ಲಿ ಕೋವಿಡ್ ಪರೀಕ್ಷೆಯ ಪಿಸಿಆರ್ ಪ್ರಯೋಗಾಲಯ ಉದ್ಘಾಟನೆ

May 7, 2020

ಚಾಮರಾಜನಗರ, ಮೇ 6(ಎಸ್‍ಎಸ್)-ರಾಜ್ಯ ಸರ್ಕಾರದ ಅನು ಮೋದನೆಯೊಂದಿಗೆ ಜಿಲ್ಲೆಯ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯಲ್ಲಿ 1.79 ಕೋಟಿ ವೆಚ್ಚದಲ್ಲಿ ಕೋವಿಡ್-19 ಪರೀಕ್ಷಿಸುವ ಪಿಸಿಆರ್ ಪ್ರಯೋಗಾಲಯ ಪ್ರಾರಂಭಗೊಂಡಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೈಕ್ರೋ ಬಯಾಲಜಿ ವಿಭಾಗದಲ್ಲಿ ಕೋವಿಡ್-19 ಪರೀಕ್ಷೆ ಸೇರಿದಂತೆ ಪಿಸಿಆರ್ ಪ್ರಯೋಗಾಲಯವನ್ನು ಉದ್ಘಾಟಿಸಿದರು.

ಬಳಿಕ, ಮಾತನಾಡಿದ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಇತರೆ ಪರೀಕ್ಷೆ ಹಾಗೂ ಸಂಶೋಧನೆಗಳಿಗಾಗಿ ಪಿಸಿಆರ್ ಪ್ರಯೋಗಾಲಯವನ್ನು ತುರ್ತಾಗಿ ಪ್ರಾರಂಭಿಸುವುದನ್ನು ಮನಗಂಡು ವೈದ್ಯ ಕೀಯ ವಿಜ್ಞಾನಗಳ ಸಂಸ್ಥೆಯ ಮೈಕ್ರೋ ಬಯಾಲಜಿ ವಿಭಾಗದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಕಾರಾತ್ಮಕ ಒಪ್ಪಿಗೆಯ ಮೇರೆಗೆ ಪ್ರಯೋಗಾಲಯ ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಪ್ರಯೋಗಾಲಯಕ್ಕೆ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೈಕ್ರೋ ಬಯಾಲಜಿ ವಿಭಾಗದ ಪ್ರಸ್ತುತ ಪ್ರಯೋಗಾಲಯಕ್ಕೆ ಸ್ಥಳ ನಿಗದಿಪಡಿಸಿ ಐಸಿಎಂಆರ್ ಮಾರ್ಗಸೂಚಿಯಂತೆ ಕಟ್ಟಡ ಮಾರ್ಪಾಡು ಮಾಡಿ ನವೀಕರಿಸಲಾಗಿದೆ. ಪಿಸಿಆರ್ ಪರೀಕ್ಷೆಯು ರೋಗವನ್ನು ನಿಖರವಾಗಿ ಪತ್ತೆ ಹಚ್ಚುವ ಸಾಧನವಾಗಿದೆ. ಕೋವಿಡ್-19 ರೋಗವನ್ನು ಪತ್ತೆ ಹಚ್ಚುವ ಸಲುವಾಗಿ ಆರ್‍ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದರು. ಪ್ರಯೋಗಾಲಯದಲ್ಲಿ ಗಂಟಲಿನ ದ್ರವದಲ್ಲಿ ರುವ ಕೋವಿಡ್-19 ವೈರಾಣು ಪತ್ತೆ ಹಚ್ಚಲು 6ರಿಂದ 8 ಗಂಟೆಗಳ ಸಮಯ ಅವಶ್ಯವಿದೆ. ಕಡಿಮೆ ಸಮಯ ಮತ್ತು ಸಿಬ್ಬಂದಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿ ನಿಖರವಾದ ವರದಿಯನ್ನು ನೀಡಬಹುದಾಗಿದೆ. ಸಂಸ್ಥೆಯಲ್ಲಿ ಅಳವಡಿಸಿರುವ ಆರ್-ಪಿಸಿಆರ್ ಉಪಕರಣ ಗಳು ಸ್ವಯಂ ಚಾಲಿತವಾಗಿದ್ದು, ಪ್ರತಿ ಸಲಕ್ಕೆ 96 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸ ಬಹುದು. ಅಂದರೆ ದಿನಕ್ಕೆ ಸುಮಾರು 300 ಪರೀಕ್ಷೆಗಳನ್ನು ಮಾಡುವ ಸಾಮಥ್ರ್ಯವುಳ್ಳ ಪ್ರಯೋಗಾಲಯವಾಗಿದೆ ಎಂದು ಹೇಳಿದರು.

ಕೋವಿಡ್-19 ರೋಗ ಪರೀಕ್ಷೆಯಲ್ಲದೆ ಪಿಸಿಆರ್ ಪ್ರಯೋಗಾಲಯದಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು, ಅನುವಂಶೀಯ ಕಾಯಿಲೆಗಳು, ವಿಧಿವಿಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷೆಗಳು, ಕ್ಯಾನ್ಸರ್, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರಗಳ ಸಂಬಂಧಿಸಿದ ಕಾಯಿಲೆಗಳ ಸಂಶೋಧನೆ ಹಾಗೂ ವಿಜ್ಞಾನ ಮತ್ತು ವಿದ್ಯಾರ್ಥಿಗಳ ಸಂಶೋಧನಾ ಚಟುವಟಿಕೆಗಳಿಗೆ ಬಳಸಬಹು ದಾಗಿದೆ ಎಂದರು. ಪ್ರಯೋಗಾಲಯಕ್ಕೆ ಅನುಮೋದನೆ ದೊರೆಯುವುದು ಬಾಕಿ ಇದೆ. ಅನುಮೋದನೆ ಸಿಕ್ಕ ನಂತರ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ. ಇದೇ ವೇಳೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಗ್ರಾಮದ ನಿಖರ ಆಗ್ರ್ಯಾ ನಿಕ್ ಫಾಮ್ರ್ಸ್ ಲಿಮಿಟೆಡ್ ನೀಡಿದ ಪಿಪಿಇ ಕಿಟ್‍ಗಳನ್ನು ವೈದ್ಯರಿಗೆ ಸಚಿವರು ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎನ್.ಮಹೇಶ್, ಸಿ.ಎಸ್.ನಿರಂಜನ್‍ಕುಮಾರ್, ಜಿಪಂ ಅಧ್ಯಕ್ಷ ಕೆ.ಎಸ್.ಮಹೇಶ್, ಡಿಸಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಹರ್ಷಲ್ ಭೋಯರ್ ನಾರಾಯಣ್‍ರಾವ್, ಎಸ್‍ಪಿ ಹೆಚ್.ಡಿ.ಆನಂದ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಜಿ.ಎಂ.ಸಂಜೀವ್, ಮೈಕ್ರೋ ಬಯೋಲಾಜಿ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಜಾವಗಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Translate »