ಮೈಸೂರು, ಜು.12(ಎಸ್‍ಪಿಎನ್)- ಕೊರೊನಾ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ವಾಗುವ `ಕೊರೊನಾ ಹೆಲ್ತ್ ಪಾಲಿಸಿ’ಗೆ ಶೇ.18 ಜಿಎಸ್‍ಟಿ ಯಿಂದ ಕೇಂದ್ರ ಸರ್ಕಾರ ಪೂರ್ಣ ವಿನಾಯ್ತಿ ನೀಡ ಬೇಕು ಎಂದು ಮೈಸೂರಿನ ಲಾರಿ ಮಾಲೀಕರ ಸಂಘ ಹಾಗೂ ಕೈಗಾರಿಕೆಗಳ ಸಂಘ ಒತ್ತಾಯಿಸಿವೆ.
ಕೊರೊನಾದಿಂದಾಗಿ ಗೂಡ್ಸ್ ಲಾರಿ ಮಾಲೀಕರಿಗೆ ಬಹಳ ತೊಂದರೆಯಾಗುತ್ತಿದೆ. ಚಾಲಕರು ಒಂದು ರಾಜ್ಯ ದಿಂದ ಮತ್ತೊಂದು ರಾಜ್ಯಕ್ಕೆ, ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಲಾರಿಗಳಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಬೇಕು. ಆಗ ವಾರಗಟ್ಟಲೇ ಮನೆಯಿಂದ ದೂರ ಉಳಿಯಬೇಕು. ದೀರ್ಘ ಸಂಚಾರದ ವೇಳೆ ಸೋಂಕು ಯಾವ ರೀತಿ ಯಲ್ಲಾದರೂ ತಗುಲಬಹುದು ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ವಿ.ಕೋದಂಡ ರಾಮು ಹಾಗೂ ಕಾರ್ಯದರ್ಶಿ ಪ್ರಕಾಶ್ ಎಫ್.ಫರೇರ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಸಂಸ್ಥೆಯಿಂದ ಸಾಂಕ್ರಾಮಿಕ ರೋಗ ಗಳಿಗೆ ಆಸ್ಪತ್ರೆಗಳಲ್ಲಿ ಕ್ಯಾಷ್‍ಲೆಸ್ ಚಿಕಿತ್ಸೆ ಪಡೆಯಲು `ಕೊರೊನಾ ಕವಚ್ ಪಾಲಿಸಿ’ ಪರಿಚಯಿಸಲಾಗಿದೆ. ಈ ಪಾಲಿಸಿ ಲಾರಿ ಮಾಲೀಕ, ಚಾಲಕರಿಗೆ ಅಗತ್ಯವಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್‍ನನ್ನು ದೂರದ ಊರಿಗೆ ಲಾರಿಯಲ್ಲಿ ಕಳುಹಿಸಿ ದಾಗ ಕೊರೊನಾ ಸೋಂಕಿತರಾದರೆ, ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ವಿಮಾ ಪಾಲಿಸಿ ಇದ್ದರೆ ಸೋಂಕಿತ ವ್ಯಕ್ತಿ ಸ್ವಂತ ಸ್ಥಳಕ್ಕೆ ಆಗಮಿಸಿ, ಉಚಿತ ಚಿಕಿತ್ಸೆ ಪಡೆಯಬಹುದು. ಹಾಗಾಗಿ ನಮ್ಮ ಸಂಘ ದಿಂದ ಪ್ರಥಮ ಹಂತವಾಗಿ 30 ಚಾಲಕರಿಗೆ ಹೆಲ್ತ್ ಪಾಲಿಸಿ ಮಾಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
25-65 ವರ್ಷದೊಳಗಿನ ವ್ಯಕ್ತಿ 50 ಸಾವಿರ ರೂ. ನಿಂದ 4 ಲಕ್ಷ ರೂ.ವರೆಗಿನ ಪಾಲಿಸಿಗಳನ್ನು 177ರಿಂದ 429 ರೂ.ಗಳಿಗೆ ಮೂರೂವರೆ ತಿಂಗಳಿಗೆ ಪಡೆಯಬಹುದು. ಮಾಲೀಕರನ್ನು ನಂಬಿದ ಲಾರಿ ಚಾಲಕರು ಭಯಬಿಟ್ಟು ಕೆಲಸ ಮಾಡುತ್ತಾರೆ. ಈ ಪಾಲಿಸಿ ಮೇಲೆ ಕೇಂದ್ರ ಸರ್ಕಾರ ಶೇ.18(ಸಾವಿರ ರೂ.ಗಳಿಗೆ 180 ರೂ. ಜಿಎಸ್‍ಟಿ ಹಣ) ಜಿಎಸ್‍ಟಿ ವಿಧಿಸುವುದರಿಂದ ಚಾಲಕರಿಗೆ ಹೆಲ್ತ್ ಪಾಲಿಸಿ ಮಾಡಿಸುವುದು ಕಷ್ಟವಾಗುತ್ತದೆ. ಹಾಗಾಗಿ ಜಿಎಸ್‍ಟಿ ವಿಧಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ಪಾಲಿಸಿ ಕೇವಲ ಲಾರಿ ಚಾಲಕರಿಗಷ್ಟೇ ಅಲ್ಲ. ಇದರಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಚಾಲಕ, ನಿರ್ವಾ ಹಕರು, ಪ್ರವಾಸಿ ಕಾರು, ಕ್ಯಾಬ್ ಚಾಲಕರು ಸೇರಿದಂತೆ ಅನೇಕರಿಗೆ ಉಪಯೋಗವಿದೆ. ಈ ಪಾಲಿಸಿ ಮಾಡಿಸಲು ಸಾಕಷ್ಟು ಹಣ ವ್ಯಯವಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ `ಕೊರೊನಾ ಕವಚ್ ಪಾಲಿಸಿ’ಗೆ ಜಿಎಸ್‍ಟಿ ಯಿಂದ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು