ಕೊರೊನಾ ಸೋಂಕಿತರು, ಕ್ವಾರಂಟೇನ್‍ನಲ್ಲಿರುವವರ ಮೇಲೆ `ಕೋವಿಡ್ ಕಾಲ್ ಸೆಂಟರ್’ ಹದ್ದಿನ ಕಣ್ಣು
ಮೈಸೂರು

ಕೊರೊನಾ ಸೋಂಕಿತರು, ಕ್ವಾರಂಟೇನ್‍ನಲ್ಲಿರುವವರ ಮೇಲೆ `ಕೋವಿಡ್ ಕಾಲ್ ಸೆಂಟರ್’ ಹದ್ದಿನ ಕಣ್ಣು

July 13, 2020

ಮೈಸೂರು,ಜು.12- ಕೊರೊನಾ ಸೋಂಕಿ ತರು ಹಾಗೂ ಕ್ವಾರಂಟೇನ್‍ನಲ್ಲಿರುವವರ ಆರೋಗ್ಯ ವಿಚಾರಿಸುವುದರೊಂದಿಗೆ ಆತ್ಮ ಸ್ಥೈರ್ಯ ಹೆಚ್ಚಿಸಿ, ಸೋಂಕು ಹರಡದಂತೆ ಲಕ್ಷ್ಮಣ ರೇಖೆ ಹಾಕುವ ನಿಟ್ಟಿನಲ್ಲಿ ಮೈಸೂ ರಲ್ಲಿ `ಕೋವಿಡ್ ಕಾಲ್ ಸೆಂಟರ್’ ಸದ್ದಿಲ್ಲದೆ ಮಹತ್ತರ ಸೇವೆ ಸಲ್ಲಿಸುತ್ತಿದೆ. 10 ಮಂದಿ ಸಿಬ್ಬಂದಿಗಳ ತಂಡ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಮಂದಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಕಾಳಜಿ ಪ್ರದರ್ಶಿಸುತ್ತಿದೆ.

ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗು ವುದರೊಂದಿಗೆ ಸೋಂಕಿಗೆ ಬಲಿಯಾಗುತ್ತಿ ರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಉಂಟು ಮಾಡಿದೆ. ಬೇರೆಡೆಯಿಂದ ಬಂದಿರುವವರು ಕಟ್ಟು ನಿಟ್ಟಾಗಿ ಹೋಮ್ ಕ್ವಾರಂಟೇನ್ ನಿಯಮ ಪಾಲಿಸದಿದ್ದರೆ ಸೋಂಕು ಇತರರಿಗೂ ಹರ ಡುವ ಮೂಲಕ ದೊಡ್ಡ ಗಂಡಾಂತರಕ್ಕೆ ಕಾರಣವಾಗುತ್ತ್ತದೆ. ಈ ಹಿನ್ನೆಲೆಯಲ್ಲಿ ಕ್ವಾರಂ ಟೇನ್‍ನಲ್ಲಿರುವವರು, ಹೊಸದಾಗಿ ಸೋಂಕಿಗೆ ತುತ್ತಾದವರು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಹಾಗೂ ನಿಯಮ ಉಲ್ಲಂಘಿಸಿ ಜಿಯೋ ಫೆನ್ಸಿಂಗ್ ಉಲ್ಲಂಘಿಸಿ ರುವವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಹೊಣೆಗಾರಿಕೆ ಕಾಲ್ ಸೆಂಟರ್‍ನದ್ದಾಗಿದೆ.

`ಕೋವಿಡ್ ಕಾಲ್ ಸೆಂಟರ್’ ರಚನೆ: ಮೈಸೂರು ನಗರ ಹಾಗೂ ಜಿಲ್ಲೆಯ ಜನ ರನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಹಾಗೂ ಕ್ವಾರಂ ಟೇನ್‍ನಲ್ಲಿರುವವರು ಮೇಲೆ ನಿಗಾ ಇಡು ವುದರೊಂದಿಗೆ ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಹಕಾರಿಯಾಗಲು ಜಿಲ್ಲಾಡಳಿತ ಎರಡು ಕಾಲ್ ಸೆಂಟರ್ ತೆರೆದಿದೆÉ. ಒಂದು ತಂಡದಲ್ಲಿ 10 ಮಂದಿ ಸಿಬ್ಬಂದಿ ಯಿದ್ದು, ದಿನ ಬಿಟ್ಟು ದಿನ ಒಂದೊಂದು ತಂಡ ಕರ್ತವ್ಯ ನಿರ್ವಹಿಸಲಿದೆ. ಮೈಸೂರು ಅರಮನೆ ಆವರಣದಲ್ಲಿರುವ ಅರಮನೆ ಮಂಡಳಿ ಕಚೇರಿ ಸಭಾಂಗಣದಲ್ಲಿ ಈ ಕಾಲ್ ಸೆಂಟರ್ ಕಾರ್ಯಾಚರಿಸುತ್ತಿದೆ. ಜಿ.ಪಂ ಅಭಿವೃದ್ಧಿ ವಿಭಾಗದ ಉಪಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ನೋಡಲ್ ಅಧಿಕಾರಿ ಯಾಗಿ ನಿಯೋಜನೆಗೊಂಡಿದ್ದು, ಜಿ.ಪಂನ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಚಾಲಕಿ ವಿ.ಎನ್.ಪೂರ್ಣಿಮಾ ಹಾಗೂ ಉಪತಹ ಶೀಲ್ದಾರ್ ಗಿರಿಜಾ ಕಾಲ್ ಸೆಂಟರ್ ತಂಡದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ದಿನಕ್ಕೆ 3 ಸಾವಿರ ಕರೆ: ಮೈಸೂರು ನಗರ ದಲ್ಲಿ ಮೊದಲ ಹಂತದ ಕೊರೊನಾ ಸೋಂಕಿನ ಬಾಧೆ ವೇಳೆ ಮೂರು ಕಾಲ್ ಸೆಂಟರ್ ತೆರೆಯಲಾಗಿತ್ತು. ಒಂದು ಮೈಸೂರು ನಗರ ಪಾಲಿಕೆ ಕಚೇರಿಯಲ್ಲಿ, ಇನ್ನೊಂದು ಅರ ಮನೆ ಮಂಡಳಿ ಕಚೇರಿ ಸಭಾಂಗಣ, ಮತ್ತೊಂದನ್ನು ನಂಜನಗೂಡಲ್ಲಿ ತೆರೆಯ ಲಾಗಿತ್ತು. ಗ್ರಾಮಲೆಕ್ಕಿಗರು, ಕಂದಾಯಾಧಿ ಕಾರಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳನ್ನು ಕಾಲ್‍ಸೆಂಟರ್‍ಗೆ ನಿಯೋಜಿಸಲಾಗಿತ್ತು. ಮೊದಲ ಹಂತದ ಸೋಂಕಿತರು ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾದ ಬಳಿಕ ಕಾಲ್ ಸೆಂಟರ್ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ 2ನೇ ಹಂತದ ಕೊರೊನಾ ಅಲೆ ಅಬ್ಬರ ಹೆಚ್ಚಾಗಿರುವುದ ರಿಂದ ಕಾಲ್ ಸೆಂಟರ್ ಸಿಬ್ಬಂದಿಗಳಿಗೆ ಸವಾ ಲಿನ ಕೆಲಸ ಎದುರಾಗಿದೆ. ನಂಜನಗೂಡಿ ನಲ್ಲಿದ್ದ ಸೆಂಟರ್ ರದ್ದಾಗಿದ್ದು, ಅರಮನೆ ಮಂಡಳಿ ಕಚೇರಿಯಲ್ಲೇ ದಿನಕ್ಕೆ ಒಂದರಂತೆ ಎರಡು ತಂಡ ಕೆಲಸ ನಿರ್ವಹಿಸುತ್ತಿದೆ.

ಗ್ರಾ.ಪಂ ಕಾರ್ಯದರ್ಶಿ, ಪ್ರಾದೇಶಿಕ ಆಯು ಕ್ತರ ಕಚೇರಿ ಸಿಬ್ಬಂದಿಗಳನ್ನು `ಕಾಲರ್’ಗಳಾಗಿ ನಿಯೋಜಿಸಲಾಗಿದ್ದು, ಗುತ್ತಿಗೆ ಆಧಾರ ದಲ್ಲಿ 3 ಮಂದಿ ಡೇಟಾ ಆಪರೇಟರ್ ನಿಯೋಜಿಸಲಾಗಿದೆ. ಮೈಸೂರಲ್ಲಿ ಸೋಂಕಿ ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಸೋಂಕಿತರ ಸಂಪರ್ಕಿತರು, ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದು ಕ್ವಾರಂ ಟೇನ್‍ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ `ಕೋವಿಡ್ ಕಾಲ್ ಸೆಂಟರ್’ ಸಿಬ್ಬಂದಿ ಕಾರ್ಯ ಮಹತ್ವ ಪಡೆದುಕೊಳ್ಳು ತ್ತಿದೆ. ದಿನಕ್ಕೆ 3 ಸಾವಿರ ಮೊಬೈಲ್ ಕರೆ ಮಾಡುತ್ತಿದ್ದಾರೆ. ಒಬ್ಬರು ಸರಾಸರಿ 275ರಿಂದ 300 ಮಂದಿಗೆ ಕರೆ ಮಾಡಬೇಕಾಗಿದೆ. ಹೊಸ ದಾಗಿ ಸೋಂಕಿಗೆ ತುತ್ತಾದವರು, ಸೋಂಕಿ ತರ ಪ್ರಥಮ, ದ್ವಿತೀಯ ಸಂಪರ್ಕಿತರು, ಕ್ವಾರಂಟೇನ್‍ನಲ್ಲಿರುವವರು, ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವ ರಿಗೂ ಕರೆ ಮಾಡಬೇಕಾಗಿದೆ. ಕ್ವಾರಂಟೇನ್ ನಲ್ಲಿರುವವರು, ಡಿಸ್ಚಾರ್ಜ್ ಆದವರಿಗೆ ಸತತ 14 ದಿನ ಕರೆ ಮಾಡಿ ಆರೋಗ್ಯ ವಿಚಾರಿ ಸುವುದರೊಂದಿಗೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಕೋರುವ ಜವಾಬ್ದಾರಿ ಕಾಲ್ ಸೆಂಟರ್ ಸಿಬ್ಬಂದಿಗಳದ್ದಾಗಿದೆ.

ಜಿಯೋ ಫೆನ್ಸಿಂಗ್ ಉಲ್ಲಂಘನೆ: ಹೋಮ್ ಕ್ವಾರಂಟೇನ್‍ನಲ್ಲಿರುವವರು ನಿಯಮ ಉಲ್ಲಂ ಘಿಸದಂತೆ ಅವರ ಮೊಬೈಲ್ ನಂಬರ್ ಅನ್ನು ಒಳಗೊಂಡಂತೆ ಜಿಯೋ ಫೆನ್ಸಿಂಗ್ ಮಾಡಲಾಗಿರುತ್ತದೆ. ಕ್ವಾರಂಟೇನ್‍ನಲ್ಲಿ ರುವವರು ನಿಯಮ ಉಲ್ಲಂಘಿಸಿ ಮನೆ ಯಿಂದ ಹೊರ ಬಂದರೆ ಜಿಯೋ ಫೆನ್ಸಿಂಗ್ ಉಲ್ಲಂಘಿಸಿರುವ ಸಂದೇಶ `ಜಿಪಿಎಸ್ ಟ್ರಾಕ್’ ಘಟಕಕ್ಕೆ ಸಂದೇಶ ರವಾನೆಯಾಗ ಲಿದೆ. ಬಳಿಕ ಆ ವ್ಯಕ್ತಿಯನ್ನು ಎಚ್ಚರಿಸುವ ಜವಾಬ್ದಾರಿ ಕಾಲ್ ಸೆಂಟರ್ ಸಿಬ್ಬಂದಿಗಳಿಗೆ ರವಾನೆಯಾಗುತ್ತದೆ. ಕೂಡಲೇ ಸಿಬ್ಬಂದಿ ಜಿಯೋ ಫೆನ್ಸಿಂಗ್ ಉಲ್ಲಂಘಿಸಿದವರಿಗೆ ಕರೆ ಮಾಡಿ ಮನೆಯಲ್ಲೇ ಇರುವಂತೆ ಸೂಚಿಸುತ್ತಾರೆ. ಮತ್ತೆ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಎಂ.ಟಿ.ಯೋಗೇಶ್‍ಕುಮಾರ್

Translate »