ಮೈಸೂರು, ಜು.12(ಆರ್‍ಕೆಬಿ)- ಜು.13ರ ಸೋಮವಾರ ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋ ತ್ಸವ. ಪ್ರತಿ ವರ್ಷದಂತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇ ಶ್ವರಿ ದೇವಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯ ನಡೆಯ ಲಿವೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಗುಲಕ್ಕೆ ಸೋಮ ವಾರ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಆಷಾಢ ಮಾಸದ ಕೃಷ್ಣಪಕ್ಷ ಸಪ್ತಮಿ ದಿನ ಬರುತ್ತದೆ. ಮುಂಜಾನೆ 4ರಿಂದಲೇ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಅಭ್ಯಂ ಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನಡೆಯಲಿದೆ. ಸಂಜೆ ದೇವಾಲಯ ಪ್ರಾಕಾರದಲ್ಲಿಯೇ ದರ್ಬಾರ್ ಉತ್ಸವ ನಡೆಯಲಿದೆ ಎಂದು ದೇವಾಲಯದ ಮುಖ್ಯ ಅರ್ಚಕ ಶಶಿಧರ ದೀಕ್ಷಿತ್ ತಿಳಿಸಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರ ಹಾಗೂ ಪ್ರತಿ ಶನಿವಾರ-ಭಾನುವಾರ ಮತ್ತು ವರ್ಧಂತಿ ದಿನ ಜನರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ.
