ಐಶ್ವರ್ಯಾ ರೈ, ಪುತ್ರಿ ಆರಾಧ್ಯಾಗೂ `ಕೊರೊನಾ’
ಮೈಸೂರು

ಐಶ್ವರ್ಯಾ ರೈ, ಪುತ್ರಿ ಆರಾಧ್ಯಾಗೂ `ಕೊರೊನಾ’

July 13, 2020

ಮುಂಬೈ, ಜು.12-ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರಿಗೂ ಕೊರೊನಾ ವಕ್ಕರಿಸಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಈಗಾಗಲೇ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಹಾಗೂ ಮಾವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ, ಪುತ್ರಿ ಆರಾಧ್ಯಾ ಹಾಗೂ ಅತ್ತೆ ಜಯಾ ಬಚ್ಚನ್ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮೂವರ ವರದಿ ಬಂದಿದ್ದು, ಐಶ್ವರ್ಯಾ ಹಾಗೂ ಆರಾಧ್ಯಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಯಾ ಬಚ್ಚನ್ ಅವರಿಗೆ ನೆಗಟಿವ್ ಬಂದಿದೆ.

ಈ ನಡುವೆ ಅಮಿತಾಭ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ. ಸೌಮ್ಯ ಲಕ್ಷಣಗಳಷ್ಟೇ ಕಂಡು ಬಂದಿದೆ. ಪ್ರಸ್ತುತ ಆಸ್ಪತ್ರೆಯ ಐಸೋಲೇಷನ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ನಟ ಅನುಪಮ್ ಖೇರ್ ತಾಯಿಗೂ ಸೋಂಕು: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರಿಗೆ ಕೊರೊನಾ ತಗುಲಿದ್ದು, ಅನುಪಮ್ ಖೇರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಖೇರ್ ಅವರ ಸಹೋದರ, ರಾಜು ಖೇರ್, ಅವರ ಅತ್ತಿಗೆ ಮತ್ತು ಸೋದರ ಸೊಸೆ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ದು ನಟ ಖೇರ್ ಅವರಿಗೆ ಮಾತ್ರ ಕೊರೊನಾ ನೆಗೆಟಿವ್ ವರದಿ ಬಂದಿದೆ. `ನನ್ನ ತಾಯಿ ದುಲಾರಿ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ನಾವು ಅವರನ್ನು ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ನನ್ನ ಸಹೋದರ, ಭಭಿ ಮತ್ತು ಸೋದರ ಸೊಸೆ ಸಹ ಕೋವಿಡ್‍ಗೆ ಪಾಸಿಟಿವಿ ವರದಿ ಪಡೆದಿದ್ದಾರೆ. ನಾನೂ ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ನನಗೆ ಸೋಂಕು ತಗುಲಿಲ್ಲ’ ಎಂದು ಖೇರ್ ಟ್ವೀಟ್ ಮಾಡಿದ್ದಾರೆ.

Translate »