ಹೋಮ್ ಐಸೋಲೇಷನ್‍ನಲ್ಲಿರುವವರಿಗೆ ಆರೋಗ್ಯ ಸೇವೆ ನೀಡಲು `ಟೆಲಿ ಮಾನಿಟರಿಂಗ್ ಸೆಂಟರ್’ ಆರಂಭ
ಮೈಸೂರು

ಹೋಮ್ ಐಸೋಲೇಷನ್‍ನಲ್ಲಿರುವವರಿಗೆ ಆರೋಗ್ಯ ಸೇವೆ ನೀಡಲು `ಟೆಲಿ ಮಾನಿಟರಿಂಗ್ ಸೆಂಟರ್’ ಆರಂಭ

July 13, 2020

ಮೈಸೂರು,ಜು.12(ಎಂಟಿವೈ)-ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೈಹಿಕವಾಗಿ ಸದೃಢರಾಗಿ ರುವ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ `ಮನೆಯ ಲ್ಲಿಯೇ ಚಿಕಿತ್ಸೆ’ ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದು, ಈ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆರೋಗ್ಯ ವಿಚಾರಿಸಿ, ಮಾನಸಿಕ ಸ್ಥೈರ್ಯ ಹೆಚ್ಚಿಸಲು 10 ಮಂದಿ ಆಪ್ತಸಮಾಲೋಚಕರ ತಂಡ ಕಾರ್ಯಾರಂಭ ಮಾಡಿದೆ.

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಗಳ ಹೊಸ ಕಚೇರಿ ಸಂಕೀರ್ಣದಲ್ಲಿ `ಟೆಲಿ ಮಾನಿಟ ರಿಂಗ್ ಸೆಂಟರ್’ ಸ್ಥಾಪಿಸಲಾಗಿದ್ದು, ಆಹಾರ ಮತ್ತು ನಾಗ ರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸ ಲಾಗಿದೆ. ಈ ತಂಡದಲ್ಲಿ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ 10 ಮಂದಿ ಅಸಾಂಕ್ರಾಮಿಕ ರೋಗ ಗಳ ಆಪ್ತ ಸಮಾಲೋಚಕರನ್ನು ನೇಮಿಸಲಾಗಿದೆ. ಎಲ್ಲ ರಿಗೂ ಜಿಲ್ಲಾಡಳಿತದ ವತಿಯಿಂದ ಮೊಬೈಲ್ ಹಾಗೂ ಸಿಮ್ ನೀಡಲಾಗಿದ್ದು, ಹೋಮ್ ಐಸೋಲೇಷನ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಆರೋಗ್ಯ ವಿಚಾರಿಸುವ ಹೊಣೆಗಾರಿಕೆ ಟೆಲಿ ಮಾನಿಟರಿಂಗ್ ಸೆಂಟರ್‍ನದ್ದಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಮಾರ್ಗಸೂಚಿ ಬದಲಿಸಿ, ಪರಿಸ್ಥಿತಿ ಗಂಭೀರವಾಗಿರುವವರನ್ನು ಮಾತ್ರ ಕೋವಿಡ್ ಆಸ್ಪತ್ರೆ ಯಲ್ಲಿ, ವೆಂಟಿಲೇಟರ್ ಅವಶ್ಯಕತೆ ಇಲ್ಲದವರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ, ವೈದ್ಯರ ಉಪಸ್ಥಿತಿ ಬೇಡದೆ ನಿಗ ದಿತ ಸಮಯದಲ್ಲಿ ಔಷಧಿ ಸೇವಿಸುವ ದೈಹಿಕವಾಗಿ ಸದೃಢವಾಗಿರುವ ಸೋಂಕಿತರನ್ನು ಅವರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದು ಕೊಳ್ಳುತ್ತಿರುವವರಿಗಾಗಿಯೇ ಟೆಲಿ ಮಾನಿಟರಿಂಗ್ ಸೆಂಟರ್ ಆರಂಭಿಸಲಾಗಿದೆ. ಜು.8ರಿಂದ ಈ ಸೆಂಟರ್ ಕಾರ್ಯಾರಂಭ ಮಾಡಿದ್ದು, ಇಂದು ಸಂಜೆವರೆಗೂ ಹೋಮ್ ಐಸೋಲೇಷನ್‍ನಲ್ಲಿರುವ ಸೋಂಕಿತರೊಂದಿಗೆ ಮೊಬೈಲ್ ಕರೆ ಮಾಡಿ ನಿರಂತರ ಒಡನಾಟ ಇಟ್ಟುಕೊಂಡು ಕಾಲ ಕಾಲಕ್ಕೆ ಅಗತ್ಯ ಸಲಹೆ,

ಸೂಚನೆ ನೀಡಲಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಹೋಮ್ ಐಸೋಲೇಷನ್‍ನಲ್ಲಿರುವವರ ಪಟ್ಟಿ ಹಾಗೂ ಮೊಬೈಲ್ ಸಂಖ್ಯೆಯನ್ನು ಈ ತಂಡಕ್ಕೆ ಕಳುಹಿಸುತ್ತದೆ. 10 ಮಂದಿ ಆಪ್ತಸಮಾಲೋಚಕರು ಸೋಂಕಿತರನ್ನು ವಿಂಗಡಿಸಿ ಅವರಿಗೆ ಕರೆ ಮಾಡಿ ಹೆಸರು, ವಯಸ್ಸು, ಕೇರ್ ಟೇಕರ್, ಪ್ರತ್ಯೇಕ ವಾಶ್ ರೂಮ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ, ಎನ್-95 ಮಾಸ್ಕ್ ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಬಳಿಕ ಸೋಂಕಿತರಿಗೆ ಬಿಪಿ, ಡಯಾಬಿಟಿಸ್, ಥೈರಾಯ್ಡ್, ಕೊಲೆಸ್ಟ್ರಾಲ್, ಟಿಬಿ, ಹೆಚ್‍ಐವಿ, ಕ್ಯಾನ್ಸರ್, ಸ್ಟ್ರೋಕ್, ಕಿಡ್ನಿ, ಲಿವರ್ ಸಮಸ್ಯೆ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುತ್ತದೆ. ಅಲ್ಲದೆ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಆಗುತ್ತಿರುವ ಬಗ್ಗೆ, ಜ್ವರ, ಪಲ್ಸ್ ರೇಟ್, ಎದೆನೋವು, ಬೆವರುವಿಕೆ, ಕಫ ಸಮಸ್ಯೆ, ಸೀನುವುದು, ಮೂಗು ಸೋರುವುದು, ಉಬ್ಬಸ, ಗಂಟಲು ನೋವು ಹಾಗೂ ಇನ್ನಿತರ ಸಮಸ್ಯೆ ಕಾಡುತ್ತಿರುವ ಬಗ್ಗೆ ಸ್ಪಷ್ಟನೆ ಕೇಳುತ್ತಾರೆ. ಸೋಂಕಿಗೆ ಒಳಗಾಗುವ ಮುನ್ನ ಹೊರಗೆ ಸುತ್ತಾಡುತ್ತಿದ್ದ ವ್ಯಕ್ತಿಗಳು ಒಂದೇ ಕೊಠಡಿಯಲ್ಲಿ 14 ದಿನ ಕಳೆಯಬೇಕಾಗಿರುವುದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಪ್ತಸಮಾಲೋಚಕರು ಹೋಮ್ ಐಸೋಲೇಷನ್‍ನಲ್ಲಿರುವವರೊಂದಿಗೆ ಸೌಜನ್ಯವಾಗಿ ಮಾತನಾಡಿ, ಅವರ ಮನಸ್ಸಲ್ಲಿರುವ ದುಗುಡವನ್ನು ಮರೆಮಾಚಿಸುವ ಪ್ರಯತ್ನ ಮಾಡಲಿದ್ದಾರೆ. ಆದರೂ ಸೋಂಕಿತರ ಮಾನಸಿಕ ಆರೋಗ್ಯ ಹದಗೆಡುತ್ತಿರುವುದು ಕಂಡುಬಂದರೆ ಮಾನಸಿಕ ರೋಗಗಳ ತಜ್ಞರು ಒಳಗೊಂಡಿರುವ `ಮೆಂಟಲ್ ಹೆಲ್ತ್ ಟೀಮ್’ಗೆ ಮಾಹಿತಿ ನೀಡಲಾಗುತ್ತದೆ. ಕೂಡಲೇ ಆ ತಂಡದ ವೈದ್ಯರು ಸಂಬಂಧಪಟ್ಟ ಸೋಂಕಿತರನ್ನು ಭೇಟಿ ಮಾಡಿ ಚಿಕಿತ್ಸೆ ನೀಡಲಿದ್ದಾರೆ.

Translate »