ಮೈಸೂರು, ಜು.12(ಪಿಎಂ)- ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮೈಸೂರು ನಗರದ 6 ಕೇಂದ್ರ ಗಳಲ್ಲಿ ಜು.13ರ ಸೋಮವಾರ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ. ಕುವೆಂಪುನಗರದ ಜ್ಞಾನಗಂಗಾ ಪ್ರೌಢಶಾಲೆ, ಜಯಲಕ್ಷ್ಮೀಪುರಂನ ಚಿನ್ಮಯ ಪ್ರೌಢಶಾಲೆ, ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಪ್ರೌಢಶಾಲೆ, ಸರಸ್ವತಿಪುರಂನ ವಿಜಯವಿಠ್ಠಲ ಪ್ರೌಢಶಾಲೆ, ವಿವಿ ಮೊಹಲ್ಲಾ ನಿರ್ಮಲ ಪ್ರೌಢಶಾಲೆ, ಎನ್‍ಆರ್ ಮೊಹಲ್ಲಾದ ಸೇಂಟ್ ಫಿಲೋಮಿನಾ ಪ್ರೌಢ ಶಾಲೆಯಲ್ಲಿ ಮೌಲ್ಯಮಾಪನ ನಡೆಯಲಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಮತ್ತು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಪ್ರತಿ ಕೇಂದ್ರದಲ್ಲಿ 300ರಿಂದ 350 ಮೌಲ್ಯ ಮಾಪಕರಿರುವರು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಪ್ರತಿ ಕೊಠಡಿಯಲ್ಲಿ 14 ಮೌಲ್ಯಮಾಪಕರು ಮಾತ್ರವೇ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 2,500 ಮೌಲ್ಯಮಾಪಕರು 6 ಕೇಂದ್ರಗಳಲ್ಲಿದ್ದು, 6 ದಿನಗಳೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲಿದ್ದಾರೆ. ಇದಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ನಿಷೇಧಾಜ್ಞೆ: ಮೌಲ್ಯಮಾಪನದ ದಿನಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮೌಲ್ಯಮಾಪನ ಕೇಂದ್ರಗಳ 200 ಮೀ. ಸುತ್ತಲ ಪ್ರದೇಶದಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮೌಲ್ಯಮಾಪಕರು ಮತ್ತು ನಿಯೋಜಿತ ಸಿಬ್ಬಂದಿ ಹೊರತುಪಡಿಸಿ ಬೇರೆ ವ್ಯಕ್ತಿಗಳು ಈ ಕೇಂದ್ರಗಳ ಬಳಿ ಸಂಚರಿಸುವುದು, ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
ಆರು ಕೇಂದ್ರಗಳಿಗೂ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಮಾರ್ಗದರ್ಶನದಲ್ಲಿ ಭಾನುವಾರ ಪಾಲಿಕೆ ಸಿಬ್ಬಂದಿ ಹೈಡ್ರೋಜನ್ ಪರಾಕ್ಸೈಡ್ ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ಯಾನಿಟೈಸ್ ಮಾಡಿದ್ದಾರೆ. ಕೇಂದ್ರಕ್ಕೆ ಆಗಮಿಸುವ ಮೌಲ್ಯಮಾಪಕರು ಹಾಗೂ ಇತರೆ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲೂ ವ್ಯವಸ್ಥೆ ಮಾಡಲಾಗಿದೆ ಎಂದು ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಮೌಲ್ಯಮಾಪನ ಮುಂದೂಡಿಕೆ
ಬೆಂಗಳೂರು, ಜು. 12- ಇತ್ತೀಚೆಗಷ್ಟೇ ಮುಕ್ತಾಯ ವಾದ 2020ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀ ಕ್ಷೆಯ ಮೌಲ್ಯಮಾಪನ ಕಾರ್ಯವು ಸೋಮವಾರ ದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭ ವಾಗಬೇಕಿದೆ. ಆದರೆ ರಾಜ್ಯ ಸರ್ಕಾರ ಜು.14ರಿಂದ 23ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸಿ ರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ಮೌಲ್ಯಮಾಪನ ಕಾರ್ಯವು ನಾಳೆಯಿಂದ ನಿಗದಿಯಂತೆ ನಡೆಯಲಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಮೌಲ್ಯಮಾಪನ ಮುಂದೂಡಿಕೆ ಯಾಗಿದ್ದು, ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ವಾರ್ಡ್‍ಗೆ ತಲಾ ಒಂದರಂತೆ ಎಲ್ಲಾ ವಾರ್ಡ್ ಗಳಿಗೂ ಆಂಬುಲೆನ್ಸ್ ವಾಹನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೊಮ್ಮನಹಳ್ಳಿ ವಲಯ ಕೊರೊನಾ ಉಸ್ತುವಾರಿ ವಹಿಸಿ ಕೊಂಡಿರುವ ಸುರೇಶ್‍ಕುಮಾರ್ ಅವರು ಇಂದು ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕೋವಿಡ್ ಪರೀಕ್ಷೆ ಫಲಿತಾಂಶ ಬರಲು ಸರಾಸರಿ ನಾಲ್ಕರಿಂದ ಐದು ದಿನಗಳಾಗುತ್ತಿವೆ. ಇನ್ನು ಮುಂದೆ ಒಂದು ದಿನದಲ್ಲಿ ಫಲಿತಾಂಶ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.