ಮಾಸ್ಕೋ, ಜು.12-ಜಗತ್ತಿನ ಹಲವು ರಾಷ್ಟ್ರಗಳು ಮಾರಕ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುವ ಲಸಿಕೆ ಕಂಡುಹಿಡಿಯುತ್ತಿವೆ. ಕ್ಲಿನಿಕಲ್ ಪ್ರಯೋಗ ವನ್ನೂ ಹಂತಹಂತವಾಗಿ ನಡೆಸುತ್ತಿವೆ.
ಈಗಾಗಲೇ ಕೆಲವು ದೇಶಗಳು ತಾವು ಕೊರೊನಾಕ್ಕೆ ಲಸಿಕೆ ಕಂಡುಹಿಡಿದಿದ್ದು, ಅದು ಪ್ರಯೋಗದ ಹಂತದಲ್ಲಿದೆ ಎಂದು ಹೇಳಿಕೊಂಡಿವೆ. ಇದೀಗ ರಷ್ಯಾ ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಲಸಿಕೆ ಸಂಶೋಧನೆ ಮಾಡಿದ್ದೇವೆ. ಅದರ ಕ್ಲಿನಿಕಲ್ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದು ತಿಳಿಸಿದೆ.
ಜಗತ್ತಿನ ಮೊದಲ ಕೋವಿಡ್-19 ಲಸಿಕೆ ಯನ್ನು ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯಾಲಜಿ ತಯಾರಿಸಿದೆ. ಈ ಲಸಿಕೆ ಮೇಲಿನ ಪ್ರಯೋಗಗಳನ್ನು ಜೂ.18ರಂದು ಮಾಸ್ಕೋದ ಮೊದಲ ವೈದ್ಯಕೀಯ ವಿಶ್ವವಿದ್ಯಾಲಯ ವಾದ ಸೆಚೆನೊವ್ ಯೂನಿವರ್ಸಿಟಿ ಪ್ರಾರಂಭಿಸಿತ್ತು. ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ಲೇಶನ್ ಮೆಡಿಕಲ್ ಆಂಡ್ ಬಯೋಟೆಕ್ನಾಲಜಿಯ ನಿರ್ದೇಶಕ ವಾದಿಮ್ ತಾರಾಸೊವ್ ಲಸಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಲಸಿಕೆ ಪ್ರಯೋಗದಲ್ಲಿ ಸೆಚೆನೊವ್ ವಿವಿಯ ಸ್ವಯಂಸೇವಕರು ಸೇರಿಕೊಂಡಿದ್ದರು. ಅವರ ಮೇಲೆ ನಡೆದ ಪ್ರಯೋಗ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಅವರಲ್ಲಿ ಒಂದು ಗುಂಪು ಜು.15ರಂದು ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಲಿದೆ. ಮತ್ತೊಂದು ಗುಂಪಿನವರನ್ನು ಜು.20ರಂದು ಡಿಸ್‍ಚಾರ್ಜ್ ಮಾಡಲಾಗುತ್ತಿದೆ. ಮನುಷ್ಯನ ದೇಹಕ್ಕೆ ಈ ಲಸಿಕೆ ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಪ್ರಯೋಗ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದು ಸಾಬೀತಾಗಿದೆ ಎಂದು ಯೂನಿವರ್ಸಿಟಿ ತಿಳಿಸಿದೆ. ವಿಶ್ವಾದ್ಯಂತ 100ಕ್ಕೂ ಹೆಚ್ಚು ಲಸಿಕೆಗಳು ಕ್ಲಿನಿಕಲ್ ಪ್ರಯೋಗದ ಹಂತದಲ್ಲಿವೆ.