ಮೈಸೂರು, ಜು.12(ಪಿಎಂ)- ಮಾಸಿಕ ಕನಿಷ್ಠ 12 ಸಾವಿರ ರೂ. ಗೌರವಧನ ಹೆಚ್ಚಳಕ್ಕೆ ಹಾಗೂ ಸಮರ್ಪಕ ಆರೋಗ್ಯ ರಕ್ಷಣಾ ಸಾಮಗ್ರಿ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸಿರುವ ಹೋರಾಟವನ್ನು ನಾಳೆಯಿಂದ (ಜು.13) ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಜು.10ರಿಂದ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿವರೆಗೆ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿದ್ದಾರೆ. ಜು.13ರಿಂದ 17ರವರೆಗೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಲು ಕರ್ನಾ ಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಮುಂದಾ ಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಸಂಘ, ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಮುಖ್ಯ ವಾಗಿ ಸರ್ಕಾರದ ನಿರ್ಲಕ್ಷ್ಯ ಮತ್ತು ಜನ ವಿರೋಧಿ ಧೋರಣೆ ವಿರುದ್ಧ ರಾಜಿ ಯಾಗದೇ ಹೋರಾಡಬೇಕು. ಇಲಾಖೆಯ ಒತ್ತಡಗಳಿಗೆ ಮಣಿಯದೇ ಮುಂದಿನ ಹೋರಾಟದತ್ತ ಮುನ್ನಡೆಯಬೇಕು ಎಂದು ಸಂಘ ಕರೆ ನೀಡಿದೆ.
ನಾನಾ ರೀತಿ ಹೋರಾಟ: ನಾಳೆಯಿಂದ ನಾನಾ ರೀತಿಯ ಹೋರಾಟಗಳಿಗೆ ಕಾರ್ಯ ಕರ್ತೆಯರು ಸಿದ್ಧರಾಗಿದ್ದಾರೆ. ಜು.13ರಂದು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮುಂದೆ ಆಯಾ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಯರು ಪ್ರತಿಭಟನೆ ಮಾಡಿ ಮನವಿಪತ್ರ ಸಲ್ಲಿಸಲಿದ್ದಾರೆ. ಜಿಲ್ಲೆ, ತಾಲೂಕು, ಪಟ್ಟಣ ಹಾಗೂ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿ, ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಲಿದ್ದಾರೆ.
ಜು.14ರಂದು ಜಿಲ್ಲಾ, ತಾಲೂಕು, ಪಟ್ಟಣ ಕೇಂದ್ರಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಿದ್ದಾರೆ. ಜು.15ರಂದು ಮುಖ್ಯಮಂತ್ರಿಗಳಿಗೆ ಎಲ್ಲಾ ಆಶಾ ಕಾರ್ಯಕರ್ತೆಯರು ಪತ್ರ ಬರೆದು ಕಳುಹಿಸುವ ಅಭಿಯಾನ ರೂಪಿಸಲಾಗಿದೆ. ಜುಲೈ 16ರಂದು ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು, ಜು.17ರಂದು ಕುಟುಂಬ ಸಮೇತ ಆಶಾ ಕಾರ್ಯಕರ್ತೆಯರು ಬೇಡಿಕೆಯ ಪೋಸ್ಟರ್ ಹಿಡಿದು ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಂಘದ ಮೈಸೂರು ಜಿಲ್ಲಾ ಸಮಿತಿ ಸಲಹೆಗಾರರಾದ ಪಿ.ಎಸ್.ಸಂಧ್ಯಾ, ನಗರದಲ್ಲಿನ 95 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,800 ಆಶಾ ಕಾರ್ಯಕರ್ತೆಯರಿದ್ದಾರೆ. ಶುಕ್ರವಾರವಷ್ಟೇ ಮುಷ್ಕರ ಆರಂಭಗೊಂಡಿದ್ದು, ಇದು ಹೀಗೆಯೇ ಮುಂದುವರೆದರೆ ಕೊರೊನಾ ಹಾವಳಿಯ ಈ ಸಂದರ್ಭದಲ್ಲಿ ಪರಿಸ್ಥಿತಿ ಕಷ್ಟವಾಗಲಿದೆ. ಹೀಗಾಗಿ ಸರ್ಕಾರ ಶೀಘ್ರವಾಗಿ ಸ್ಪಂದಿಸುವ ಕೆಲಸ ಮಾಡಬೇಕು. ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಪಂಗಳ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಮೈಸೂರು ನಗರದಲ್ಲಿ ನಗರ ಪಾಲಿಕೆಯ ಎಲ್ಲಾ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.