ಶಿಸ್ತು ಪಾಲಿಸದಿದ್ದರೆ ಪೊಲೀಸ್ ವ್ಯವಸ್ಥೆಯೇ ವಿಫಲವಾಗುತ್ತದೆ
ಮೈಸೂರು

ಶಿಸ್ತು ಪಾಲಿಸದಿದ್ದರೆ ಪೊಲೀಸ್ ವ್ಯವಸ್ಥೆಯೇ ವಿಫಲವಾಗುತ್ತದೆ

September 9, 2018

ನಿರ್ಗಮನ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಐಜಿಪಿ ಶರತ್‍ಚಂದ್ರ ಅಭಿಮತ
ಮೈಸೂರು: ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತು ಪಾಲಿಸದಿದ್ದರೆ ಇಡೀ ಪೊಲೀಸ್ ವ್ಯವಸ್ಥೆಯೇ ವಿಫಲವಾಗುತ್ತದೆ ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಲಲಿತ್‍ಮಹಲ್ ರಸ್ತೆಯಲ್ಲಿರುವ ಕೆಎಸ್‍ಆರ್‍ಪಿ 5ನೇ ಪಡೆ ಕವಾಯತು ಮೈದಾನದಲ್ಲಿ ಇಂದು ಆಯೋಜಿಸಿದ್ದ ಸಿಎಆರ್ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಂದನೆ ಸ್ವೀಕರಿಸಿ ಮಾತನಾಡಿದರು.

ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಮತ್ತು ಶಿಸ್ತು ಕಾಪಾಡಬೇಕು, ತಪ್ಪಿದಲ್ಲಿ ಇಡೀ ವ್ಯವಸ್ಥೆಯೇ ಕುಸಿಯುತ್ತದೆ ಎಂದೂ ಐಜಿಪಿ ಆತಂಕ ವ್ಯಕ್ತಪಡಿಸಿದರು.

ಸಶಸ್ತ್ರ ಸಿಬ್ಬಂದಿಗೆ ಜವಾಬ್ದಾರಿ ಹೆಚ್ಚಾಗಿದೆ. ಗುಂಪು ಘರ್ಷಣೆ, ದೊಂಬಿ, ಗಲಾಟೆಯಂತಹ ಘಟನೆಗಳನ್ನು ತಹಬದಿಗೆ ತರುವಲ್ಲಿ ಸಿವಿಲ್ ಪೊಲೀಸರಿಂದ ಸಾಧ್ಯವಾಗದ ಸಮಯದಲ್ಲಿ ಸಶಸ್ತ್ರ ಸಿಬ್ಬಂದಿ ಕರ್ತವ್ಯಕ್ಕೆ ಧಾವಿಸುವುದರಿಂದ ಅವರ ಜವಾಬ್ದಾರಿ ಪ್ರಮುಖ ಎಂದೂ ತಿಳಿಸಿದರು.

ಮುಂದಿನ 35 ವರ್ಷ ಇಲಾಖೆಯಲ್ಲಿ ಹೇಗೆ ಕೆಲಸ ಮಾಡಬೇಕೆಂಬುದುರ ಬಗ್ಗೆ ಕಳೆದ 8 ತಿಂಗಳ ಬುನಾದಿ ತರಬೇತಿಯಲ್ಲಿ ಹೇಳಿಕೊಡಲಾಗಿದೆ. ಮುಂದೆ ನಿಯೋಜಿತ ಸ್ಥಳಗಳಲ್ಲಿ ಕೆಲಸ ಮಾಡುವಾಗ ಸಿಎಆರ್, ಡಿಎಆರ್, ಶ್ವಾನದಳ, ಮೌಂಟೆಡ್, ಕಾರಾಗೃಹ ಹಾಗೂ ಇನ್ನಿತರ ಘಟಕಗಳಲ್ಲಿ ಕೆಲಸ ಮಾಡುವಾಗ ದಕ್ಷತೆ, ಧೈರ್ಯ ಹಾಗೂ ನಿರ್ಭೀತಿಯಿಂದ ಸೇವೆ ಸಲ್ಲಿಸಬೇಕೆಂದೂ ಶರತ್‍ಚಂದ್ರ ಅವರು ಇದೇ ಸಂದರ್ಭ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಲಾಠಿ ಪ್ರಹಾರ, ಫೈರಿಂಗ್, ಟಿಯರ್‍ಗ್ಯಾಸ್ ಮಾಡಬೇಕಾದಂತಹ ಪರಿಸ್ಥಿತಿ ಉಂಟಾದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಕಾನೂನು ಅರಿವಿರಬೇಕು ಹಾಗೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಶರತ್‍ಚಂದ್ರ ಸಲಹೆ ನೀಡಿದರು.

ಜನವರಿ 1ರಿಂದ ಸಿಎಆರ್‍ನ ಪೊಲೀಸ್ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪಡೆಯುತ್ತಿದ್ದ 180 ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪೈಕಿ 18 ಮಂದಿ ಸ್ನಾತಕೋತ್ತರ ಪದವೀಧರರು 115 ಮಂದಿ ಪದವೀಧರರು ಹಾಗೂ 47 ಮಂದಿ ಪದವಿಪೂರ್ವ ವಿದ್ಯಾರ್ಹತೆ ಹೊಂದಿರುವವರಾಗಿದ್ದಾರೆ.

ತರಬೇತಿ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದವರಿಗೆ ಐಜಿಪಿ ಶರತ್‍ಚಂದ್ರ ಅವರು ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಿದರು. ಒಳಾಂಗಣದಲ್ಲಿ ಹೆಚ್.ಎನ್.ಅನಿಲ್‍ಕುಮಾರ್(ಪ್ರಥಮ), ಐಪಿ ಜಯಣ್ಣ ಮತ್ತು ಮಲ್ಲೇಶ್ ಭೀಮಪ್ಪ ತೇಲಿ(ದ್ವಿತೀಯ) ಹಾಗೂ ಜಿ.ಬಿ.ಬಾಬು(ತೃತೀಯ) ಬಹುಮಾನ ಪಡೆದರು.

ಹೊರಾಂಗಣ ವಿಭಾಗದಲ್ಲಿ ಮುರುಘೇಂದ್ರ ಪಡಸಲಗಿ, ಮಲ್ಲೇಶ್ ಭೀಮಪ್ಪ ತೇಲಿ, ಸಿದ್ದಪಲ್ಲಯ್ಯ ಕ್ರಮವಾಗಿ ಬಹುಮಾನ ಪಡೆದರು. ರೈಫಲ್ ಶೂಟಿಂಗ್‍ನಲ್ಲಿ ಸಂಗನಗೌಡ ಭೀ ಪಾಟೀಲ(ಪ್ರಥಮ), ಮೊಳಪ್ಪ(ದ್ವಿತೀಯ), ವಿನೋದ್‍ಕುಮಾರ್, ಬಿ.ಆರ್.ಗಿರೀಶ್ ಹಾಗೂ ಕೆ.ಬಸವಶೆಟ್ಟಿ (ತೃತೀಯ) ಬಹುಮಾನ ಗಳಿಸಿದ್ದಾರೆ.

ಸುರೇಶ್ ಐಹೊಳೆ ಅವರು ಡಿಜಿಪಿ ಪುರಸ್ಕಾರಕ್ಕೆ ಭಾಜನರಾದರೆ, ಮುರುಘೇಂದ್ರ ಪಡಸಲಗಿ ಅವರು ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡರು. ಪ್ರಧಾನ ದಳಪತಿಯಾದ ಆರ್‍ಪಿಐ ಐಜಿ ಅಶೋಕ್‍ಕುಮಾರ್ ಹಾಗೂ ಆರ್‍ಎಸ್‍ಐ ಪ್ರಕಾಶ್ ನೇತೃತ್ವದಲ್ಲಿ ಆಕರ್ಷಕ ನಿರ್ಗಮನ ಪಥಸಂಚಲನ ನಡೆಯಿತು.

ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಎಸ್ಪಿ ಅಮಿತ್‍ಸಿಂಗ್, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಒಂಟಿಗೋಡಿ, ಡಿಸಿಪಿಗಳಾದ ಎನ್.ವಿಷ್ಣುವರ್ಧನ, ಬಿ.ವಿ.ಕಿತ್ತೂರ, ಕೆಎಸ್‍ಆರ್‍ಪಿ ಮೌಂಟೆಡ್ ಕಂಪನಿಯ ಪ್ರವೀಣ್ ಆಳ್ವಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ನಿವೃತ್ತ ಎಎಸ್‍ಪಿ ಬಾಬು, ಎಎಸ್‍ಐ ಲಕ್ಷ್ಮೀ ಅವರು ನಿರ್ಗಮನ ಪಥಸಂಚಲನದ ಕಾರ್ಯಕ್ರಮದ ನಿರೂಪಣೆ ಮಾಡಿದರು.

Translate »