ಮೈಸೂರು ನಗರ ಪಾಲಿಕೆ ಪೌರ ಕಾರ್ಮಿಕರ ಬೆಂಬಲ
ಮೈಸೂರು: ಕನಿಷ್ಠ ಕೂಲಿ, ಇಎಸ್‍ಐ, ಪಿಎಫ್ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಐದು ದಿನಗಳಿಂದ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಪೌರಕಾರ್ಮಿಕರು ನಡೆಸುತ್ತಿರುವ ಧರಣಿಯಲ್ಲಿ ಶನಿವಾರ ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಮುಖಂಡರು ಪಾಲ್ಗೊಂಡು ಬೆಂಬಲ ಸೂಚಿಸಿದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದ ಬಳಿ ಅಹೋರಾತ್ರಿ ಧರಣಿ ಮುಂದುವರೆಸಿದ್ದ ವಿವಿಯ ಪೌರಕಾರ್ಮಿಕರು ವಿವಿಧ ಆಡಳಿತ ಮಂಡಳಿಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದ ಆಶ್ರಯದಲ್ಲಿ ಪೌರ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಹಾಗೂ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ, ಪೌರಕಾರ್ಮಿಕರ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮಾರ, ರಾಜ್ಯ ಸಮಿತಿಯ ಉಪಾಧ್ಯಕ್ಷ ಆರ್.ಶಿವಣ್ಣ, ಮುಖಂಡ ಪಳನಿಸ್ವಾಮಿ ಹಾಗೂ ಇನ್ನಿತರರು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಈ ವೇಳೆ ಮಾಜಿ ಮೇಯರ್ ನಾರಾಯಣ್ ಅವರಲ್ಲಿ ಪೌರ ಕಾರ್ಮಿಕರು, ಕಳೆದ 14 ವರ್ಷಗಳಿಂದ ವಿವಿಯಲ್ಲಿ ದುಡಿಯುತ್ತಿದ್ದರೂ ನಮಗೆ ಕನಿಷ್ಠ ಕೂಲಿ, ಇಪಿಎಫ್ ಸೇರಿದಂತೆ ನೀಡಬೇಕಿದ್ದ ಸೌಲಭ್ಯಗಳನ್ನು ಕಲ್ಪಿಸದೇ ಶೋಷಣೆ ಮಾಡಲಾಗುತ್ತಿದೆ. ಇಎಸ್‍ಐ ಹಾಗೂ ಪಿಎಫ್‍ಗೆ ಹಣ ಕಡಿತ ಮಾಡಿಕೊಳ್ಳುತ್ತಿದ್ದರೂ ಅದನ್ನು ಅವರ ಖಾತೆಗೆ ಜಮೆ ಮಾಡಿಲ್ಲ. ಇಎಸ್‍ಐ ಕಾರ್ಡ್ ವಿತರಿಸಿಲ್ಲ. ಅನಾರೋಗ್ಯಕ್ಕೀಡಾದರೂ ರಜೆ ನೀಡುವುದಿಲ್ಲ. ಗೈರು ಹಾಜರಾದರೆ ಹಣ ಕಡಿತ ಮಾಡಲಾಗುತ್ತಿದೆ ಎಂದು ದೂರಿದರು.
ಬಳಿಕ ಮಾತನಾಡಿದ ಮಾಜಿ ಮೇಯರ್ ನಾರಾಯಣ್, ಕಳೆದ ಐದು ದಿನಗಳಿಂದಲೂ ಪೌರಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರೂ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಯಾವುದೆ ಭರವಸೆ ನೀಡದಿರುವುದು ಖಂಡನೀಯ. ಹಲವು ವರ್ಷದಿಂದ ಪೌರ ಕಾರ್ಮಿಕರ ಇಎಸ್‍ಐ ಹಾಗೂ ಪಿಎಫ್‍ಗೆ ಹಣ ಕಡಿತ ಮಾಡಿ ಖಾತೆ ಜಮೆ ಮಾಡಿಲ್ಲದೆ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನೊಂದ ಪೌರ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಮಧ್ಯ ಪ್ರವೇಶಿಸಬೇಕು. ಆ ಮೂಲಕ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮೈಸೂರು ವಿವಿಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಶೇಖರ ಮೇಟಿ, ಕಾರ್ಯದರ್ಶಿ ಉಷಾ ರಾಣಿ, ಎಐಎಂಎಸ್‍ಎಸ್ ಸಂಘಟನೆಯ ಸಂಧ್ಯಾ, ಎಐಡಿವೈಓ ಸಂಘಟನೆಯ ರವಿ ಸೇರಿದಂತೆ ಮೈಸೂರು ವಿವಿ ಮಹಿಳಾ ಪೌರಕಾರ್ಮಿಕರು ಪಾಲ್ಗೊಂಡಿದ್ದರು.