ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ವಿಶೇಷ ತಯಾರಿ
ಮೈಸೂರು

ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ವಿಶೇಷ ತಯಾರಿ

September 9, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ, ಅರಮನೆಯ ಅಂಗಳದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಗೆ ಪ್ರತಿದಿನ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

ಜಂಬೂ ಸವಾರಿ ದೃಷ್ಟಿಯಿಂದ ಆನೆಗಳತ್ತ ವಿಶೇಷ ಗಮನ ನೀಡಲಾಗುತ್ತಿದ್ದು, ದಿನದಿಂದ ದಿನಕ್ಕೆ ಪೌಷ್ಟಿಕ ಆಹಾರದ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಮೈಸೂರು ಅರಮನೆಯ ಆವರಣದಿಂದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯಿತು ಮೈದಾನದವರೆಗೆ ಸುಮಾರು 4 ಕಿ.ಮೀ. ಕ್ರಮಿಸಬೇಕಾದ ದಸರಾ ಆನೆಗಳಿಗೆ ರಾಜ ಭೋಜನ ನೀಡಿ, ಅವುಗಳ ಶಕ್ತಿ ವೃದ್ಧಿಸುವಂತೆ ಮಾಡಲಾಗುತ್ತಿದೆ. ಆ ಮೂಲಕ ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ಹೆಜ್ಜೆ ಹಾಕಲು ಬೇಕಾದ ತಾಕತ್ತು ತುಂಬುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಏನೇನು?: ಅರ್ಜುನ ನೇತೃತ್ವದ 6 ಆನೆಗಳಿಗೆ ಪ್ರತಿ ದಿನ 2 ಬಾರಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮುಂಜಾನೆ 5.30ಕ್ಕೆ ಹಾಗೂ ಸಂಜೆ 5ಕ್ಕೆ ಶಕ್ತಿ ವೃದ್ಧಿಸಿ, ಮೈಕಟ್ಟು ಅರಳಿಸುವ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲ ಅಕ್ಕಿ, ಈರುಳ್ಳಿ ಬೇಯಿಸಿ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತಿದೆ.

ತಯಾರಿಸುವ ವಿಧಾನ: ಆನೆಗಳಿಗೆ ವಿಶೇಷ ಆಹಾರವನ್ನು ತಯಾರಿಸಲು ಅತೀ ಕಾಳಜಿ ನಿರ್ವಹಿಸುತ್ತಿದ್ದು, ಆನೆಗಳ ಉಸ್ತುವಾರಿ ಪಶುವೈದ್ಯರ ಸಹಾಯಕ ರಂಗರಾಜು ಅವರನ್ನು ಇದಕ್ಕೆ ನಿಯೋಜಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 10.30ಕ್ಕೆ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆಹಾರ ತಯಾರಿಕೆಗಾಗಿಯೇ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿಯನ್ನು ಬೇಯಿಸಲಾಗುತ್ತಿದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಬಲ ಅಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ, ಮತ್ತೆ ಬೇಯಿಸಲಾಗುತ್ತದೆ. ಹೀಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಬೇಯಿಸಿದ ನಂತರ ಒಂದು ಗಂಟೆ ಇಡಲಾಗುತ್ತದೆ. ಮಧ್ಯಾಹ್ನ 3.30ಕ್ಕೆ ಬೇಯಿಸಿದ ಧಾನ್ಯಗಳನ್ನು ದೊಡ್ಡ ತಟ್ಟೆಗೆ ಹಾಕಿ ಮುದ್ದೆಯಂತೆ ಉಂಡೆ ಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಹೋಗುವ ಮುನ್ನ ನೀಡಲಾಗುತ್ತದೆ.

ತಾಲೀಮು ಮುಗಿಸಿ ಬಂದ ನಂತರ ರಾತ್ರಿ 7ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥಗಳನ್ನು ಬೇಯಿಸಲಾಗುತ್ತದೆ. ರಾತ್ರಿ 9ರ ನಂತರ ಬೇಯಿಸಿದ ಆಹಾರ ಪದಾರ್ಥವನ್ನು ದಾಸ್ತಾನು ಕೊಠಡಿಯಲ್ಲಿಟ್ಟು ಬೀಗ ಹಾಕಲಾಗುತ್ತದೆ. ಮುಂಜಾನೆ 5ಕ್ಕೆ ಬೇಯಿಸಿದ ಆಹಾರ ಪದಾರ್ಥವನ್ನು ತೆಗೆದು ಮುದ್ದೆ ಕಟ್ಟಿ 5.30ರಿಂದ 6.30ರ ಒಳಗೆ ಎಲ್ಲಾ ಆನೆಗಳಿಗೂ ನೀಡಲಾಗುತ್ತದೆ. ನಂತರ ಅನೆಗಳು ತಾಲೀಮಿಗೆ ಹೊರಡಲಿವೆ.

ಎಷ್ಟೆಷ್ಟು?: ಪ್ರತಿ ದಿನ ಎರಡು ಬಾರಿ ಆನೆಗಳಿಗೆ ಆಹಾರ ನೀಡಲು 70 ಕೆ.ಜಿ. ಹಸಿರು ಕಾಳು, 70 ಕೆಜಿ ಉದ್ದಿನಕಾಳು, 70 ಕೆಜಿ ಕುಸುಬುಲು ಅಕ್ಕಿ, 70 ಕೆಜಿ ಗೋಧಿಯನ್ನು ಬೇಯಿಸಲಾಗುತ್ತದೆ. ಅಲ್ಲದೆ 70 ಕೆಜಿ ಕ್ಯಾರೆಟ್, 70 ಕೆಜಿ ಬೀಟ್‍ರೂಟ್, 70 ಕೆಜಿ ಮೂಲಂಗಿ, 70 ಕೆಜಿ ಗೆಡ್ಡೆಕೋಸು, 70 ಕೆಜಿ ಸೌತೇಕಾಯಿ ಕತ್ತರಿಸಿ ಆನೆಗಳಿಗೆ ನೀಡಲಾಗುತ್ತದೆ. ಒಂದೊಂದು ಆನೆಗೆ ಒಂದು ಟೈಮ್‍ಗೆ 15ರಿಂದ 25 ಕೆಜಿ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತದೆ. ಅಂಬಾರಿ ಹೊರುವ ಅರ್ಜುನನಿಗೆ ಒಂದು ಟೈಮ್‍ಗೆ 25ರಿಂದ 30 ಕೆಜಿ ನೀಡಲಾಗುತ್ತದೆ. ಇದರೊಂದಿಗೆ ಹೆಣ್ಣಾನೆಗಳನ್ನು ಹೊರತುಪಡಿಸಿ ಗಂಡಾನೆಗಳಿಗೆ ಅರ್ಧ ಕೆಜಿಯಂತೆ ದಿನಕ್ಕೆ ಒಂದು ಕೆಜಿ ಬೆಣ್ಣೆ ನೀಡಲಾಗುತ್ತಿದೆ. ಅರ್ಜುನನಿಗೆ ದಿನಕ್ಕೆ ಒಂದೂವರೆ ಕೆಜಿ ಬೆಣ್ಣೆ ನೀಡಲಾಗುತ್ತಿದೆ. ಪೌಷ್ಟಿಕ ಆಹಾರದೊಂದಿಗೆ ಒಂದು ಆನೆಗೆ ದಿನಕ್ಕೆ 450ರಿಂದ 600 ಕೆಜಿ ಆಲದಸೊಪ್ಪು, 250 ಕೆಜಿ ಹಸಿ ಹುಲ್ಲು, 50 ಕೆಜಿ ಭತ್ತದ ಹುಲ್ಲನ್ನು ನೀಡುವ ಮೂಲಕ ತಯಾರಿ ಮಾಡಲಾಗುತ್ತಿದೆ.

ಕುಸುರೆ: ಒಂದೆಡೆ ಪೌಷ್ಟಿಕ ಆಹಾರ, ಆಲದ ಸೊಪ್ಪು, ಒಣಹುಲ್ಲು, ಹಸಿ ಹುಲ್ಲು ನೀಡಿದರೆ, ಮಧ್ಯಾಹ್ನದ ವೇಳೆ ಆನೆಗಳಿಗೆ ಸುಮಾರು 35ಕೆಜಿ ಕುಸುರೆ ನೀಡಲಾಗುತ್ತಿದೆ. ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಇಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿ(ಕುಸುರೆ) ಆನೆಗಳಿಗೆ ನೀಡಲಾಗುತ್ತಿದೆ.

ಮೂರು ಬಾರಿ ನೀರು: ಆನೆಗಳು ಪ್ರತಿ ದಿನ ಮೂರು ಬಾರಿ ನೀರು ಕುಡಿಸಲಿದ್ದು, ದಿನವೊಂದಕ್ಕೆ 250ರಿಂದ 300 ಲೀಟರ್ ನೀರು ಕುಡಿಯುತ್ತವೆ. ಮುಂಜಾನೆ 5.30ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರು ಕುಡಿಸಲಾಗುತ್ತದೆ.

ದಸರಾ ಆನೆಗಳಿಗೆ ಹಸಿವಾಗಲು ಹಾಗೂ ಮೈಕಟ್ಟಲು ವಿಟಮಿನ್ ವಿ ಹಾಗೂ ಬಿ ಕಾಂಪ್ಲೆಕ್ಸ್ ನೀಡಲಾಗುತ್ತಿದೆ. ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ನಂತರ ದಿನದಿಂದ ದಿನಕ್ಕೆ ಎಲ್ಲಾ ಆನೆಗಳಿಗೂ ಆಹಾರ ಪ್ರಮಾಣವನ್ನು ಹೆಚ್ಚಿಸಲಾಯಿತು. ಅದರಲ್ಲಿಯೂ ಅಂಬಾರಿ ಹೊರುವ ಅರ್ಜುನನಿಗೆ ಎಲ್ಲಾ ಆನೆಗಳಿಗಿಂತ ಹೆಚ್ಚಾಗಿ ಆಹಾರ ನೀಡಲಾಗುತ್ತಿದೆ. ಮರದ ಅಂಬಾರಿ ತಾಲೀಮು ಆರಂಭವಾದ ನಂತರ ಜಂಬೂಸವಾರಿ ದಿನದವರೆಗೂ ಮತ್ತಷ್ಟು ಆಹಾರವನ್ನು ನೀಡಲಾಗುತ್ತದೆ. ಆಹಾರ ತಯಾರಿಸುವಾಗ ಜಾಗ್ರತೆ ವಹಿಸಲಾಗುತ್ತದೆ. ಪಶು ವೈದ್ಯರ ಸೂಚನೆಯ ಮೇರೆಗೆ ಆಹಾರ ಪ್ರಮಾಣವನ್ನು ಹೆಚ್ಚಳ ಮಾಡಲಾಗುತ್ತದೆ. – ರಂಗರಾಜು, ದಸರಾ ಆನೆಗಳ ಉಸ್ತುವಾರಿ

ಎಲ್ಲಾ ಆನೆಗಳಿಗೆ ಶಕ್ತಿ ವೃದ್ಧಿಸಲು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತಿ ದಿನ ದಸರಾ ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ಇಟ್ಟು ನೋಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಆಗಮಿಸಿರುವ ಎಲ್ಲಾ ಆನೆಗಳಿಗೂ ಈಗಾಗಲೇ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಆಗಮಿಸುವ ಆನೆಗಳಿಗೂ ಪೌಷ್ಟಿಕ ಆಹಾರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಸಾಮಥ್ರ್ಯ ಅರ್ಜುನನಿಗೆ ಇದೆಯಾದರೂ ಮತ್ತಷ್ಟು ತಯಾರಿ ಮಾಡಲಾಗುತ್ತಿದೆ. – ಡಾ.ಡಿ.ಎನ್.ನಾಗರಾಜು, ಪಶುವೈದ್ಯ

Translate »