ಪೂರ್ಣಚಂದ್ರ ತೇಜಸ್ವಿ ಸೂಕ್ಷ್ಮತೆಯುಳ್ಳ `ಜನವಿಜ್ಞಾನಿ’
ಮೈಸೂರು

ಪೂರ್ಣಚಂದ್ರ ತೇಜಸ್ವಿ ಸೂಕ್ಷ್ಮತೆಯುಳ್ಳ `ಜನವಿಜ್ಞಾನಿ’

September 9, 2018
  •  ಪರಿಸರವಾದಿ ನಾಗೇಶ್ ಹೆಗಡೆ ಅಭಿಮತ
  • ಮೈಸೂರಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ-80’ ಸ್ಮರಣೆ

ಮೈಸೂರು: ಮಣ್ಣಿನ ಸೊಗಡು, ಸಸ್ಯ ಸಂಪತ್ತು, ನದಿ-ತೊರೆಗಳ ಬಗೆಗೆ ಪ್ರತಿಸ್ಪಂದನೆ ಮೂಲಕ ಅಭಿವ್ಯಕ್ತಿಗೊಳಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡದ ಸತ್ವವನ್ನು ಜಗತ್ತಿಗೆ ಸಾರಿದ `ಜನವಿಜ್ಞಾನಿ’ ಎಂದು ಚಿಂತಕ ಹಾಗೂ ಪರಿಸರವಾದಿ ನಾಗೇಶ್ ಹೆಗಡೆ ಸ್ಮರಿಸಿದರು.

ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ, ಮೈಸೂರು ಫಿಲಂ ಸೊಸೈಟಿ, ನಿರಂತರ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘದ ಸಂಯುಕ್ತಾಶ್ರಯದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 80ನೇ ಜನ್ಮದಿನ ಹಾಗೂ ಅಭಿರುಚಿ ಪ್ರಕಾಶನದ 25ನೇ ವಾರ್ಷಿಕೋತ್ಸವದ ಅಂಗವಾಗಿ `ಕೆ.ಪಿ.ಪೂರ್ಣಚಂದ್ರ ತೇಜಸ್ವಿ-80’ ಶೀರ್ಷಿಕೆಯಡಿ ತೇಜಸ್ವಿ ಕುರಿತಂತೆ ಹಮ್ಮಿಕೊಂಡಿರುವ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ಪ್ರದರ್ಶನ ಸೇರಿದಂತೆ ಎರಡು ದಿನಗಳ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೂಕ್ಷ್ಮವಾಗಿ ಎಲ್ಲವನ್ನೂ ಅವಲೋಕಿಸುತ್ತಿದ್ದ ಪೂರ್ಣ ಚಂದ್ರ ತೇಜಸ್ವಿ (ತೇಜಸ್ವಿ) ಅವರದು ಅನನ್ಯ ವ್ಯಕಿತ್ವ. ಆ ಮೂಲಕ ತೇಜಸ್ವಿ ಅವರು ಒಬ್ಬ `ಜನವಿಜ್ಞಾನಿ (ಸಿಟಿಜನ್ ಸೈಂಟಿಸ್ಟ್)’ ಆಗಿ ಹೊರಹೊಮ್ಮಿದ್ದರು. ಬೆಳಕು ನೀಡುವ ದೀಪಕ್ಕೆ ಅವರನ್ನು ಹೋಲಿಸಬಹುದು. ಜೊತೆಗೆ ದ್ವಿಪದ ಪ್ರಾಕೃತಿಕ ಸೊಬಗು ಇವರಲ್ಲಿ ಗೋಚರಿಸುತ್ತಿತ್ತು. ಹಡಗುಗಳಿಗೆ ದಾರಿ ಸೂಚಿಸುವಲ್ಲಿ ದೀಪಸ್ತಂಭಗಳು ಮಹತ್ವದ ಪಾತ್ರ ವಹಿಸುತ್ತವೆ. ಅದೇ ರೀತಿ ತೇಜಸ್ವಿ ಸಮಾಜಕ್ಕೆ ದಾರಿ ದೀಪವಾಗಿದ್ದವರು. ಅವರದು ವೈವಿಧ್ಯಮಯ ವ್ಯಕಿತ್ವ ಎಂದು ಬಣ್ಣಿಸಿದರು.

ತೇಜಸ್ವಿಯಂತಹ ಹತ್ತಾರು ವ್ಯಕಿತ್ವ ಅಗತ್ಯ: ಬಹುತೇಕ ಯುವ ಜನರು ಇಂದು ಉನ್ನತ ವಿದ್ಯಾಭ್ಯಾಸ ಹಾಗೂ ವೃತ್ತಿಗಾಗಿ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ತೇಜಸ್ವಿ ತಾವು ನೆಲೆ ನಿಂತಿದ್ದ ಮೈಸೂರು ಬಿಟ್ಟು ಮೂಡಿಗೆರೆ ಹೋಗುತ್ತಾರೆ. ಹೀಗೆ ನೆಲದ ದನಿಗೆ ಸ್ಪಂದಿಸುವ ತೇಜಸ್ವಿಯಂತಹ ವ್ಯಕಿತ್ವಗಳು ನಮ್ಮ ಸಮಾಜಕ್ಕೆ ಅಗತ್ಯ ಎಂದು ನುಡಿದರು.

ಇಂದು ಅಭಿವೃದ್ಧಿ ಎಂಬ ಸುನಾಮಿಯಲ್ಲಿ ಸ್ಥಳೀಯತೆ ಕೊಚ್ಚಿ ಹೋಗುತ್ತಿದೆ. ಗ್ರಾಹಕರಲ್ಲಿ ಕೊಳ್ಳುಬಾಕ ಪ್ರವೃತ್ತಿ ಹೆಚ್ಚಾಗಿದೆ. ಜೊತೆಗೆ ಅವೈಜ್ಞಾನಿಕ ಅಭಿವೃದ್ಧಿಯ ಭರದಲ್ಲಿ ಕಳೆದ 30 ವರ್ಷಗಳಲ್ಲಿ 3 ಲಕ್ಷ ಜೀವ ವೈವಿಧ್ಯಗಳು ನಾಶವಾಗಿವೆ ಎಂದರಲ್ಲದೆ, ಜೀವವೈಧ್ಯತೆಯನ್ನು ಮೈಗೂಡಿಸಿಕೊಂಡಿದ್ದ ತೇಜಸ್ವಿ ಮನೆಯಿಂದ ಹೊರಗೆ ಹೊರಟರೆ ಸಣ್ಣ ಸಣ್ಣದ್ದನ್ನು ಗಮನಿಸುತ್ತಿದ್ದರು. ಕೊರಳಲ್ಲಿ ಬೈನಾಕ್ಯುಲರ್, ಗನ್, ಕ್ಯಾಮೆರಾ ಇತ್ಯಾದಿ ಪರಿಕರಗಳನ್ನು ಹೊತ್ತೊಯ್ಯುತ್ತಿದ್ದರು. ಸಣ್ಣ ಝರಿ, ತೊರೆ, ಕಾಡು, ಬೆಟ್ಟ, ಗುಡ್ಡಗಾಡುಗಳನ್ನು ಅಲೆಯುತ್ತ ಕೀಟ, ಪಕ್ಷಿ, ಪ್ರಾಣಿಗಳ ಅಂತಃ ಸತ್ವವನ್ನು ಅರಿಯುತ್ತ ಪ್ರತಿಸ್ಪಂದನೆಯನ್ನು ನಿರೀಕ್ಷಿಸುತ್ತಿದ್ದರು ಎಂದು ತಿಳಿಸಿದರು.

ಕಾಲು ದಾರಿಯಲ್ಲಿ ಸಾಗುತ್ತಿದ್ದರು: ಪೂರ್ಣಚಂದ್ರ ತೇಜಸ್ವಿ ಬದುಕಿದ್ದ ದಿನಗಳವರೆಗೂ ಹೆದ್ದಾರಿಯಲ್ಲಿ ಸಾಗದೆ ಚಿಕ್ಕಚಿಕ್ಕ ಕಾಲು ದಾರಿಗಳಲ್ಲಿ ಸಾಗುತ್ತ ಜೀವವೈವಿಧ್ಯತೆ, ಬಹುಸಂಸ್ಕøತಿಯನ್ನು ಆಳವಾಗಿ ಅಧ್ಯಯನ ಮಾಡುವ ಪ್ರವೃತ್ತಿ ಹೊಂದಿದ್ದವರು ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ತಿಳಿಸಿದರು.

ಇದೇ ವೇಳೆ ಯುವ ಲೇಖಕ ಹೊರಹಳ್ಳಿ ಆನಂದ್ ಅವರ `ಬಂಗಾರಿ’ ಮತ್ತು ಕೆ.ಎಸ್.ಪರಮೇಶ್ವರ ಅವರ `ತೇಜಸ್ವಿ ಸಿಕ್ಕರು..’ ಕೃತಿಗಳನ್ನು ನಾಗೇಶ್ ಹೆಗಡೆ ಬಿಡುಗಡೆ ಮಾಡಿದರು. ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ, ಕೃಪಾಕರ-ಸೇನಾನಿ ಸಿದ್ಧಪಡಿಸಿದ ಪೂರ್ಣಚಂದ್ರ ತೇಜಸ್ವಿ ಅವರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಇದಕ್ಕೂ ಮುನ್ನ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನಕ್ಕೆ ನಾಗೇಶ್ ಹೆಗಡೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘದ ನಂದಿನಿ ಜಯರಾಂ, ಹೊಸಕೋಟೆ ಬಸವರಾಜು, ಮೈಸೂರು ಫಿಲಂ ಸೊಸೈಟಿಯ ಕೆ.ಮುದ್ದುಕೃಷ್ಣ, ಮಾನವ ಮಂಟಪದ ಉಗ್ರನರಸಿಂಹೇಗೌಡ, ಪ್ರಕಾಶಕ ಅಭಿರುಚಿ ಗಣೇಶ್, ಲೇಖಕ ಹೊರಹಳ್ಳಿ ಆನಂದ್ ಮತ್ತಿತರರು ಹಾಜರಿದ್ದರು.

Translate »