ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು
ಮೈಸೂರು

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು

September 9, 2018

ಮೈಸೂರು: ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿ ತೊಡಗಿರುವ ಪಾಂಡವಪುರದ ಅಪ್ಪಾಜಿ ಮಠ ಹಾಗೂ ಮಹಾಕಾಳಿ ಶ್ರೀ ಚಕ್ರೇಶ್ವರಿ ಪೀಠದ ಸ್ವಾಮೀಜಿ ಶ್ರೀ ವಿದ್ಯಾಹಂಸಭಾರತಿ ಮಹಾಸ್ವಾಮೀಜಿ ವಿರುದ್ಧ ಕುವೆಂಪುನಗರ ಠಾಣೆ ಪೊಲೀಸರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ ಪ್ರಕರಣ ದಾಖಲು ಮಾಡಿದ್ದಾರೆ.

ತನಗೆ ಲೈಂಗಿಕ ಕಿರುಕುಳ ನೀಡಿ, ಅಶ್ಲೀಲ ಪದ ಪ್ರಯೋಗ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ನೊಂದ ಮಹಿಳೆ ಸ್ವಾಮೀಜಿ ಹಾಗೂ ಅವರ ಕೃತ್ಯಕ್ಕೆ ತನ್ನ ಗಂಡನೇ ಕುಮ್ಮಕ್ಕು ನೀಡಿದ್ದಾರೆ ಎಂದು ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪುನಗರ ಠಾಣೆ ಸಬ್ ಇನ್ಸ್‍ಪೆಕ್ಟರ್ ಕೆ.ರಘು, ಸೆಪ್ಟೆಂಬರ್ 7ರಂದು ಐಪಿಸಿ ಸೆಕ್ಷನ್ 354 ಎ ಮತ್ತು ಬಿ, 149, 504, 448, 506, 363, 354 ಮತ್ತು 323 ರೀತ್ಯಾ ಪ್ರಕರಣ(ಸಂಖ್ಯೆ 135/2018) ದಾಖಲಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಮಹಿಳೆಯ ಪತಿ ಮೊದಲ ಆರೋಪಿಯಾಗಿದ್ದು, ಶೀ ವಿದ್ಯಾಹಂಸ ಭಾರತಿ ಸ್ವಾಮೀಜಿ ಎರಡನೇ ಆರೋಪಿಯಾಗಿದ್ದಾರೆ.

ಆಗಸ್ಟ್ 1ರಿಂದ ಸೆಪ್ಟೆಂಬರ್ 24ರವರೆಗೆ ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀಗಳು ಚಾತುರ್ಮಾಸ ವ್ರತ ಮಹೋತ್ಸವ ಆಯೋ ಜಿಸಿದ್ದರು. ಈ ಚಾತುರ್ಮಾಸ ಪೂಜೆಗೆ ಮೈಸೂರು ಸುತ್ತ ಮುತ್ತಲಿಂದ ಪ್ರತೀ ದಿನ ಸಾವಿರಾರು ಭಕ್ತರು ಆಗ ಮಿಸಿ ತಮ್ಮ ಇಷ್ಟಾರ್ಥ ಸಿದ್ಧಿ ಗಾಗಿ ಸ್ವಾಮೀಜಿ ಬಳಿ ಕೋರಿಕೆ ಸಲ್ಲಿಸಿ, ಭಕ್ತ ಪರವಶರಾ ಗುತ್ತಿದ್ದರು. ಗಣ್ಯಾತಿಗಣ್ಯರು, ಪ್ರಮುಖ ರಾಜಕೀಯ ಮುಖಂಡರು, ಧಾರ್ಮಿಕ ಪ್ರಮುಖರು, ಉದ್ಯಮಿ ಗಳೂ ವ್ರತದಲ್ಲಿ ಪಾಲ್ಗೊಂಡು ಸ್ವಾಮೀಜಿ ಬಳಿ ಸಂಕಲ್ಪ ಮಾಡಿಕೊಳ್ಳುತ್ತಿದ್ದರು.

ದೂರಿನ ಸಾರಾಂಶ: ಸ್ವಾಮೀಜಿ ತನಗೆ ಪರಿಚಯವಿದೆ. ಅವರು ಹೇಳಿದಂತೆ ಕೇಳಿದರೆ ನಮ್ಮ ಸಾಲವನ್ನೆಲ್ಲಾ ತೀರಿಸಿಕೊಳ್ಳಬಹುದೆಂದು ನನ್ನ ಪತಿ ಹೇಳಿದರು. ಅದಕ್ಕೆ ನಾನು ನಿರಾಕರಿಸಿದೆ. ಆದರೆ ಸೆಪ್ಟೆಂಬರ್ 4ರಂದು ಮಧ್ಯರಾತ್ರಿ 1 ಗಂಟೆ ವೇಳೆಗೆ ಮನೆಯ ಕಾಲಿಂಗ್‍ಬೆಲ್ ಶಬ್ದ ಆಯಿತು. ನನ್ನ ಗಂಡ ಬಂದಿರಬಹುದೆಂದು ತಿಳಿದು ಬಾಗಿಲು ತೆರೆದಾಗ ನನ್ನ ಗಂಡನ ಜೊತೆಯಲ್ಲಿ ಸ್ವಾಮೀಜಿ ಮತ್ತವರ 5 ಮಂದಿ ಒಳಗೆ ನುಗ್ಗಿದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಸ್ವಾಮೀಜಿ ನನ್ನ ಜುಟ್ಟು ಹಿಡಿದು ಅಶ್ಲೀಲ ಪದಗಳಿಂದ ನಿಂದಿಸಿ ‘ನನ್ನ ಸೇವೆಗೆ ಬರಲು ನಿರಾಕರಿಸುತ್ತಿದ್ದೀಯಾ’ ಎಂದು ಹೇಳಿ ನಾನು ಮಲಗುವ ಕೋಣೆಗೆ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಲ್ಲದೆ, ಖಾಸಗಿ ಸ್ಥಳಗಳಿಗೆ ಕಾಲಿನಿಂದ ಒದ್ದು ತೀವ್ರ ಲೈಂಗಿಕ ಕಿರುಕುಳ ನೀಡಿದರು ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಅದಕ್ಕೆ ನನ್ನ ಗಂಡನೇ ಕುಮ್ಮಕ್ಕು ನೀಡಿದ್ದಾನೆ. ‘ನಾನು ದೇವೀ ಸ್ವರೂಪದವನು. ನನ್ನ ಬೇಡಿಕೆಯನ್ನು ತಿರಸ್ಕರಿಸುತ್ತೀಯಾ, ನನ್ನ ಮನೋ ಇಚ್ಛೆಯಂತೆ ನಡೆದುಕೊಂಡರೆ ನಿನಗೆ ಒಳ್ಳೆಯದಾಗುತ್ತದೆ’ ಎಂದು ಮೃಗದಂತೆ ವರ್ತಿಸಿದ್ದಲ್ಲದೆ ಮಂಚ, ಹಾಸಿಗೆ ಮತ್ತು ನನ್ನ ಬಟ್ಟೆಗಳಿಗೆ ಬೆಂಕಿ ಹಚ್ಚಿದ ಸ್ವಾಮೀಜಿ, ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಈ ರೀತಿ ವರ್ತಿಸಿದ ಎಂದು ಆಕೆ ಆರೋಪಿಸಿದ್ದಾರೆ.

ಅವರಿಂದ ತಪ್ಪಿಸಿಕೊಂಡು ಎದುರು ಮನೆಗೆ ಹೋಗಲೆತ್ನಿಸಿದಾಗ ಸ್ವಾಮೀಜಿ ತಾನು ಬಂದಿದ್ದ ಫಾರ್ಚುನರ್ ಕಾರ್(ಕೆಎ.51 ಎಂಎಫ್. 356)ನಲ್ಲಿ ಎಳೆದು ಕೂರಿಸಿಕೊಂಡು ಬಲವಂತವಾಗಿ ಕುವೆಂಪುನಗರದಲ್ಲಿರುವ ನನ್ನ ಗಂಡನ ತಮ್ಮನ ಮನೆಗೆ ಕರೆದೊಯ್ಯುವಾಗ ತನ್ನ ತೊಡೆ ಮೇಲೆ ಕೂರಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಮಹಿಳೆ ವಿವರಿಸಿದ್ದಾರೆ. ಮೂರು ದಿನದೊಳಗಾಗಿ ನನ್ನ ಸೇವೆಗೆ ಬರದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುವ ವಿದ್ಯಾಹಂಸ ಭಾರತಿ ಸ್ವಾಮೀಜಿ, ನನ್ನ ಗಂಡ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಂತರ ಸ್ವಾಮೀಜಿ, ಮಹಿಳೆಯ ಪತಿ ಹಾಗೂ ಕೃತ್ಯ ಎಸಗಿದ ಇತರರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕುವೆಂಪುನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ನಂತರ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿದ್ದ ಚಾತುರ್ಮಾಸ ವ್ರತ ಸ್ಥಗಿತಗೊಂಡಿದೆ.

Translate »