ಉನ್ನತ ಶಿಕ್ಷಣ ಇಲಾಖೆಯ 5 ಸಾವಿರ ಹುದ್ದೆ 6 ತಿಂಗಳಲ್ಲಿ ಭರ್ತಿ
ಮೈಸೂರು

ಉನ್ನತ ಶಿಕ್ಷಣ ಇಲಾಖೆಯ 5 ಸಾವಿರ ಹುದ್ದೆ 6 ತಿಂಗಳಲ್ಲಿ ಭರ್ತಿ

September 9, 2018

ಮೈಸೂರು: 15 ವರ್ಷದಿಂದ ಒಬ್ಬ ಪ್ರಾಂಶುಪಾಲರ ನೇಮಕವಾಗಿಲ್ಲ. ಸುಮಾರು 5 ಸಾವಿರ ಹುದ್ದೆಗಳು ಖಾಲಿಯಿದ್ದು, ಮುಂದಿನ 6 ತಿಂಗಳಲ್ಲಿ ಪ್ರಾಂಶುಪಾಲರ ಹುದ್ದೆ ಸೇರಿದಂತೆ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನ ಹೂಟಗಳ್ಳಿ ಸರಸ್ವತಿ ಕನ್ವೆನ್ಷನಲ್ ಹಾಲ್‍ನಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ಶನಿವಾರ ಆಯೋಜಿಸಿದ್ದ ಮೈಸೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಂಚ ವಿಲ್ಲದ ಕ್ಷೇತ್ರವಿದ್ದರೆ ಅದು ಶಿಕ್ಷಣ ಕ್ಷೇತ್ರ ಮಾತ್ರ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ, ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು.

ಮೊಬೈಲ್ ಬಳಸದಂತೆ ಎಚ್ಚರಿಸಿ: ಪ್ರಸ್ತುತ ಶಿಕ್ಷಕರು, ವಿದ್ಯಾರ್ಥಿಗಳು ಮೊಬೈಲ್‍ಗಳನ್ನು ಹೆಚ್ಚು ಬಳಸುತ್ತಿದ್ದು, ಶಾಲೆಯ ವೇಳೆ ಶಿಕ್ಷಕರು ಮೊಬೈಲ್ ಬಳಕೆ ಮಾಡಬಾರದು. ಹಾಗೆಯೇ ವಿದ್ಯಾರ್ಥಿಗಳಿಗೂ ಮೊಬೈಲ್ ಬಳಸದಂತೆ ಎಚ್ಚರಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಆಸಕ್ತಿ ಬರುತ್ತದೆ. ಈ ಕೆಲಸ ಸೋಮವಾರದಿಂದಲೇ ಆಗಬೇಕು ಎಂದು ಹೇಳಿದರು.

100 ರಲ್ಲಿ 20 ಮಂದಿಗೆ ಉದ್ಯೋಗ: ಇದುವರೆಗೆ ಬಹಳಷ್ಟು ಮಂದಿ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಪದವಿ ಪಡೆದವರು ಮಂತ್ರಿಗಳೂ ಆಗಿದ್ದಾರೆ. ಆದರೆ, ಶಿಕ್ಷಣ ಕ್ಷೇತ್ರ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಚಿಂತಿಸಿಲ್ಲ. ಸುಮಾರು 15-20 ವರ್ಷಗಳಿಂದ ಒಂದೇ ರೀತಿಯ ಶಿಕ್ಷಣ ನೀಡುತ್ತಿದ್ದಾರೆ. ಹಾಗಾಗಿ ಪದವಿ ಪಡೆದ 100 ಮಂದಿಯಲ್ಲಿ 20 ಮಂದಿಗೆ ಮಾತ್ರವೇ ಉದ್ಯೋಗ ದೊರೆಯುತ್ತಿದ್ದು, ಉಳಿದ 80 ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ. ಇಂದು ಪ್ರಾಥಮಿಕ, ಪ್ರೌಢ, ಕಾಲೇಜು ಹೀಗೆ ಎಲ್ಲಾ ಶಿಕ್ಷಕರಿಗೂ ತರಬೇತಿಯ ಅಗತ್ಯವಿದೆ ಎಂದು ಹೇಳಿದರು.

ಗ್ರಾಮಗಳ ದತ್ತು: ಪ್ರಾಧ್ಯಾಪಕರು ಜಿಲ್ಲೆಯ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಕಲೆ, ಸಾಹಿತ್ಯ, ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಜತೆಗೆ ಭಾರತೀಯ ಸಂಸ್ಕøತಿ, ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು. ಹಾಗೆಯೇ ಪ್ರತಿ ವಿಶ್ವವಿದ್ಯಾನಿಲಯ ಗಳು 5 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕೆಂದೂ ತಿಳಿಸಿದ್ದೇನೆ ಎಂದರು.

ವಿಜ್ಞಾನ ಓದಿದವರಿಂದ ವಾಣಿಜ್ಯಶಾಸ್ತ್ರ ಬೋಧನೆ: ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದವರು ವಿಜ್ಞಾನ ಬೋಧಿಸುತ್ತಿದ್ದಾರೆ. ವಿಜ್ಞಾನ ವ್ಯಾಸಂಗ ಮಾಡಿದವರು ವಾಣಿಜ್ಯಶಾಸ್ತ್ರ ಬೋಧಿಸುತ್ತಿದ್ದಾರೆ. ಇಂಥ ಪರಿಸ್ಥಿತಿ ಶಿಕ್ಷಣ ಕ್ಷೇತ್ರದಲ್ಲಿದ್ದು, ಈ ಕುರಿತು ಬಹಳಷ್ಟು ಚಿಂತನೆ, ಚರ್ಚೆಗಳು ನಡೆಯುತ್ತಿವೆ. ಶಿಕ್ಷಣ ಪಡೆದು ಉದ್ಯೋಗವಿಲ್ಲದಿದ್ದರೆ, ಶಿಕ್ಷಣ ಯಶಸ್ವಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಗುಣಮಟ್ಟದ, ಮೌಲ್ಯಧಾರಿತ, ಉದ್ಯೋಗವನ್ನು ಒದಗಿಸುವಂತಹ ಶಿಕ್ಷಣ ಅಗತ್ಯವಾಗಿದೆ ಎಂದರು.

ರಾಜಕೀಯ ಬೇಡ: ಶಾಲಾ-ಕಾಲೇಜುಗಳಲ್ಲಿ ರಾಜಕೀಯ ಮಾಡಬಾರದು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಎಷ್ಟೋ ಮಂದಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು, ಅವರಿಗೆಲ್ಲ ಶಿಕ್ಷಕರೇ ಗುರು. ಹಾಗಾಗಿ ಶಿಕ್ಷಕರಲ್ಲಿ ಯಾವುದೇ ಕೀಳರಿಮೆ ಬೇಡ. ಮೈಸೂರು ತಾಲೂಕಿನ ಎಲ್ಲಾ ಶಾಲೆಗಳ ಆವರಣದಲ್ಲಿ ಗಿಡ-ಮರಗಳನ್ನು ಬೆಳೆಸಬೇಕು. ಜತೆಗೆ ಕ್ರೀಡೆ, ಸಾಹಿತ್ಯ, ಯೋಗ ಹೀಗೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಬೇಕು. ಅದಕ್ಕೆ ಬೇಕಾದ ಸಹಾಯ ಮಾಡುವುದಾಗಿ ತಿಳಿಸಿದರು.
ಅರಿವಿರಲಿ, ಅಹಂ ಬೇಡ: ಶಿಕ್ಷಕರು ತಮ್ಮ ಸ್ಥಾನವನ್ನು ಅರಿತು ನಡೆಯಬೇಕು. ಸರ್ವಪಲ್ಲಿ ರಾಧಾಕೃಷ್ಣ, ಎಪಿಜೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದರಂತೆ ನೀವು ಗುರುತಿಸಿಕೊಳ್ಳಬೇಕು. ಅರಿವಿರಲಿ. ಆದರೆ ಅಹಂ ಬೇಡ ಎಂದ ಅವರು, ಮುಂದಿನ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ಜಿಲ್ಲೆ ಪ್ರಥಮ ಸ್ಥಾನ ಪಡೆಯುವಂತೆ ಮಾಡಬೇಕು. ಆದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ 58 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯರಾದ ಎಂ.ದಿನೇಶ್, ರೂಪ, ತಾಪಂ ಸದಸ್ಯರಾದ ಎಸ್.ಮಹದೇವ ಗೌಡ, ರಾಣಿ, ಮೈಸೂರು ತಾಲೂಕು ಇಸಿಓ ಸಿ.ವಿ.ಜಯರಾಮ, ಕ.ರಾ.ಪ್ರಾ.ಶಾ.ಶಿ. ಸಂಘ ಅಧ್ಯಕ್ಷ ಉಮೇಶ್, ತಹಸಿಲ್ದಾರ್ ರಮೇಶ್, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವ ಮತ್ತಿತರರು ಉಪಸ್ಥಿತರಿದ್ದರು.

Translate »