ಮೂಲ ಸೌಕರ್ಯಕ್ಕೆ ಆಗ್ರಹಿಸಿ: ಮೈಸೂರು ಮಾನಸ ಗಂಗೋತ್ರಿ ಹಳೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಮೂಲ ಸೌಕರ್ಯಕ್ಕೆ ಆಗ್ರಹಿಸಿ: ಮೈಸೂರು ಮಾನಸ ಗಂಗೋತ್ರಿ ಹಳೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ

September 9, 2018

ಮೈಸೂರು:  ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಆದ್ಯತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪುರುಷರ ಹಳೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಮಾನಸಗಂಗೋತ್ರಿಯ ಆವರಣದಲ್ಲಿರುವ ಈ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ದಿಢೀರ್ ಪ್ರತಿಭಟನೆ ನಡೆಸಿ, ವಿದ್ಯಾರ್ಥಿನಿಲಯದ ಅವ್ಯವಸ್ಥೆಯನ್ನು ಖಂಡಿಸಿದರು. ಕೆಲಕಾಲ ವಿದ್ಯಾರ್ಥಿನಿಲಯದ ಮುಂದೆ ಪ್ರತಿಭಟನೆ ನಡೆಸಿ, ನಂತರ ವಿಶ್ವವಿದ್ಯಾನಿಲಯದ ಮುಖ್ಯದ್ವಾರದ ಬಳಿ ಧರಣಿ ನಡೆಸಿದರು.

ಹಳೆಯ ವಿಶ್ವವಿದ್ಯಾನಿಲಯ ಅವ್ಯವಸ್ಥೆಯ ಆಗರವಾಗಿದೆ. ವಿದ್ಯಾರ್ಥಿಗಳು ವಾಸಿಸುವುದಕ್ಕೆ ಯೋಗ್ಯವಾದ ವಾತಾವರಣವಿಲ್ಲ. ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇದಕ್ಕೆ ಕಲುಷಿತ ನೀರೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ವಿದ್ಯಾರ್ಥಿ ನಿಲಯದಲ್ಲಿ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿದ್ಯಾರ್ಥಿನಿಲಯದ ವಾತಾವರಣ ಮತ್ತಷ್ಟು ಕಲುಷಿತಗೊಂಡಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.
ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು. ಸೊಳ್ಳೆ ಹಾಗೂ ತಿಗಣೆ ಹಾವಳಿ ನಿಯಂತ್ರಿಸಲು ಔಷಧಿ ಸಿಂಪಡಿಸಬೇಕು. ಎಲ್ಲಾ ಶೌಚಾಲಯಗಳಲ್ಲಿಯೂ ಹೊಸ ಬಕೆಟ್ ನೀಡಿ, ಹೊಸ ನಲ್ಲಿ ಅಳವಡಿಸಬೇಕು. ಪಾಚಿ ಕಟ್ಟಿರುವುದರಿಂದ ವಿದ್ಯಾರ್ಥಿಗಳು ಜಾರಿ ಬೀಳಲು ಕಾರಣವಾಗುತ್ತಿರುವ ಸ್ನಾನದ ಗೃಹವನ್ನು ಸ್ವಚ್ಛಗೊಳಿಸಬೇಕು.

ಕೊಠಡಿಗಳಲ್ಲಿ ಸಮವಸ್ತ್ರ ಹಾಗೂ ಬಟ್ಟೆ ಇಟ್ಟುಕೊಳ್ಳಲು ಮೊಳೆ ಅಥವಾ ಹ್ಯಾಂಗರ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಕೊಠಡಿಗಳಿಗೂ ಬಣ್ಣ ಬಳಿಸಿ ವ್ಯಾಸಂಗಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ವಿದ್ಯಾರ್ಥಿನಿಲಯಕ್ಕೆ ಅಗತ್ಯವಿರುವ ಸ್ವಚ್ಛತಾ ಪರಿಕರಗಳನ್ನು ಹೆಚ್ಚಾಗಿ ಪೂರೈಸಬೇಕು. ತಿಂಗಳಿಗೊಮ್ಮೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ನಿಲಯದಲ್ಲಿರುವ ಜಿಮ್ ಶಾಲೆಯನ್ನು ಪ್ರತಿದಿನ ತೆರೆಯಬೇಕು. ಕೆಟ್ಟಿರುವ ಸೋಲಾರ್ ವ್ಯವಸ್ಥೆಯನ್ನು ದುರಸ್ತಿ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಬೆಳಗಿನಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮೈಸೂರು ವಿವಿಯ ಪ್ರಭಾರ ಕುಲಪತಿ ಪ್ರೊ. ಟಿ.ಕೆ.ಉಮೇಶ್, ಕುಲಸಚಿವರಾದ ಪ್ರೊ. ರಾಜಣ್ಣ, ಪ್ರೊ. ಜೆ.ಸೋಮಶೇಖರ್, ಆಡಳಿತಾಧಿಕಾರಿ ಡಿ.ಕೆ.ಶ್ರೀನಿವಾಸ್ ಆಗಮಿಸಿ ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದರಲ್ಲದೆ, ಸಮಸ್ಯೆಗಳನ್ನು 10 ದಿನಗಳಲ್ಲಿ ಬಗೆಹರಿಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ಕ್ಷೇಮಪಾಲನಾಧಿಕಾರಿಯನ್ನು ಬದಲಿಸುವುದಕ್ಕೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷ ಶಿವಮೂರ್ತಿ, ಸಂಶೋಧಕರ ಸಂಘದ ಅಧ್ಯಕ್ಷ ಮಹಾದೇವಸ್ವಾಮಿ, ಗೋಪಾಲ್, ಮಾಜಿ ಅಧ್ಯಕ್ಷ ಬಿ.ಮೂರ್ತಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಾದ, ಕೆ.ಎಂ.ಸುರೇಶ್, ಬಸವಣ್ಣ, ನಾಗೇಂದ್ರ, ಕೆ.ರಾಜು, ರಾಜೇಶ್, ಗೋವಿಂದರಾಜು, ಚೇತನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »