ನಂಜನಗೂಡು ತಾಲೂಕಿಗೆ 2.71 ಕೋಟಿ ರೂ. ಅನುದಾನ
ಮೈಸೂರು ಗ್ರಾಮಾಂತರ

ನಂಜನಗೂಡು ತಾಲೂಕಿಗೆ 2.71 ಕೋಟಿ ರೂ. ಅನುದಾನ

May 21, 2020

ನಂಜನಗೂಡು, ಮೇ 20 (ರವಿ)-ನಂಜನಗೂಡು ತಾಲೂಕಿಗೆ 15ನೇ ಹಣಕಾಸು ಯೋಜನೆಯಡಿ 2.71 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಸದ್ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ತಿಳಿಸಿದರು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನೀರಿನ ಮೂಲಗಳನ್ನು ವೃದ್ಧಿಬೇಕು. ಆ ನಿಟ್ಟಿನಿಲ್ಲಿ ಡ್ಯಾಮ್‍ಗಳ ಪುನಃಶ್ಚೇತನ, ಒವರ್‍ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಆಯ್ಕೆ: ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಮೇ 5ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಬುಧವಾರ ನಡೆದ ತಾಪಂ ವಿಶೇಷ ಸಭೆಯಲ್ಲಿ ಹೆಡತಲೆ ತಾಪಂ ಕ್ಷೇತ್ರದ ಸದಸ್ಯ ಮಹದೇವನಾಯ್ಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವನಾಯ್ಕ ಮಾತನಾಡಿದರು. ಸಭೆಯಲ್ಲಿ ತಾಪಂ ಇಓ ಶ್ರೀಕಂಠರಾಜೇ ಅರಸ್ ಅನುದಾನ ಬಳಕೆಯ ಕ್ರಿಯಾ ಯೋಜನೆ ಮಂಡಿಸಿ, ಅನುದಾನ ಬಳಕೆಗೆ ಸದಸ್ಯರಿಂದ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಗೋವಿಂದರಾಜನ್, ಸದಸ್ಯರಾದ ಸಿ.ಎಂ.ಮಹದೇವಯ್ಯ, ಹೇಮಾಕೆಂಡಗಣ್ಣಪ್ಪ, ವೆಂಕಟೇಶ್, ಪದ್ಮನಾಭ, ಕೊಂಗಳ್ಳಿ ಬಸವರಾಜು, ಹೆಮ್ಮರಗಾಲ ಶಿವಣ್ಣ, ಸಿದ್ದರಾಜೇಗೌಡ, ಮಲ್ಕುಂಡಿ ಬಸವರಾಜು ಸೇರಿದಂತೆ ತಾಪಂ ಸದಸ್ಯರಿದ್ದರು.

Translate »