ಮೈಸೂರು, ಅ.28(ವೈಡಿಎಸ್)- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ನೋಟು ಮುದ್ರಣ ಸಂಸ್ಥೆಯ ಮೈಸೂರು ಶಾಖೆಯು ಜಿಲ್ಲಾಡಳಿತಕ್ಕೆ ದೇಣಿಗೆಯಾಗಿ ನೀಡಿದ ಎರಡು ಆಂಬ್ಯುಲೆನ್ಸ್ ವಾಹನಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ಅಮರನಾಥ್ ಮಾತನಾಡಿ, ಎರಡೂ ವಾಹನಗಳನ್ನು ಹಾಡಿ ಜನರಿಗೆ ಅನುಕೂಲವಾಗುವಂತೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಆರ್‍ಬಿಐ ನೋಟು ಮುದ್ರಣ ಸಂಸ್ಥೆ ವ್ಯವಸ್ಥಾಪಕ ಎನ್.ಜಿ.ಮುರುಳಿ ಮಾತನಾಡಿ, ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ನಮ್ಮ ಸಂಸ್ಥೆಯು ಹಲವು ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈಗ 29.2 ಲಕ್ಷ ರೂ. ಮೌಲ್ಯದ ಎರಡು ಆಂಬ್ಯುಲೆನ್ಸ್ಸ್‍ಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಆರ್.ಬಿ.ಐ ನೋಟು ಮುದ್ರಣ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ರಮೇಶ್ ಕುಮಾರ್ ಲಭ, ಸಹಾಯಕ ಪ್ರಧಾನ ವ್ಯವಸ್ಥಾಪಕ ಅಜಿತ್‍ಕುಮಾರ್ ಕರಣ್ ಮತ್ತಿತರರು ಉಪಸ್ಥಿತರಿದ್ದರು.