ಚಾಮುಂಡಿಬೆಟ್ಟದಲ್ಲಿಂದು ಸರಳ ರಥೋತ್ಸವ
ಮೈಸೂರು

ಚಾಮುಂಡಿಬೆಟ್ಟದಲ್ಲಿಂದು ಸರಳ ರಥೋತ್ಸವ

October 29, 2020

ಮೈಸೂರು, ಅ.28(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಮುಗಿದ ನಂತರ ಸಂಪ್ರ ದಾಯದಂತೆ ಚಾಮುಂಡಿಬೆಟ್ಟದಲ್ಲಿ ಅ.29ರ ಬೆಳಗ್ಗೆ 9.40ರಿಂದ 10.05ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಸರಳ ಹಾಗೂ ಸಾಂಪ್ರದಾಯಿಕ ರಥೋತ್ಸವ ಜರುಗಲಿದೆ.

ಕೋವಿಡ್-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಈ ಬಾರಿ ದೊಡ್ಡ ರಥ ಬಳಸುತ್ತಿಲ್ಲ. ಬದಲಾಗಿ ಸಂಪ್ರದಾಯಕ್ಕೆ ಅಡಚಣೆ ಉಂಟಾಗದಂತೆ ಸರಳವಾಗಿ ರಥೋತ್ಸವ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬೆಟ್ಟದ ದೇವಾಲಯಕ್ಕೆ ಸೇರಿದ ಚಿಕ್ಕರಥವನ್ನು ನಾಳಿನ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಜನ ಜಂಗುಳಿ ನಿಯಂತ್ರಿಸುವ ನಿಟ್ಟಿನಲ್ಲಿ ನಾಳೆ ಮಧ್ಯಾಹ್ನ 12 ಗಂಟೆವರೆಗೆ ಚಾಮುಂಡಿಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಸಿಬ್ಬಂದಿ, ಬೆಟ್ಟದ ಕೆಲ ನಿವಾಸಿಗಳು ಹಾಗೂ ಅಧಿಕಾರಿಗಳ ಸಮ್ಮುಖ ದಲ್ಲಿ ಮಾತ್ರ ಚಿಕ್ಕ ರಥೋತ್ಸವ ಜರುಗಲಿದೆ.

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅಥವಾ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಥ ಎಳೆದು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದೇವಾಲಯದ ಪ್ರಾಂಗಣದಲ್ಲಿ 1 ಸುತ್ತು ರಥೋತ್ಸವ ನಡೆಯಲಿದೆ. ಸಂಪ್ರದಾಯದಂತೆ ಮಂಗಳವಾದ್ಯ ಹಾಗೂ ಕುಶಾಲತೋಪು ಸಿಡಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಬೆಟ್ಟದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬುಧವಾರ ಮಧ್ಯಾಹ್ನದಿಂದಲೇ ಬಂದ್ ಮಾಡಲಾಗಿದೆ. ಬೆಟ್ಟದ ನಿವಾಸಿಗಳು ಹಾಗೂ ತುರ್ತು ಸೇವೆ ವಾಹನಗಳ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ.

Translate »